ಶಿರಸಿ: ಶಿರಸಿ-ಕುಮಟಾ ರಸ್ತೆಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವುದಿಲ್ಲ. ಬಂದ್ ಮಾಡಿದರೆ ಅಂಥವರ ಮೇಲೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಕುಮಟಾದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪಕ್ಕದಲ್ಲಿ ವಾಹನ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ರಸ್ತೆ ಕಾಮಗಾರಿ ನಡೆಸಬೇಕು ಎಂದು ಆದೇಶಿಸಿದರು.ಈ ಸಂಬಂಧ ಒಂದು ಆದೇಶವನ್ನೇ ಹೊರಡಿಸಿ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಸೂಚನೆ ನೀಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾನೂ ಸ್ಥಳ ಪರಿಶೀಲನೆ ಮಾಡಿದ್ದೆ. ಯಾವುದೇ ಕಾರಣಕ್ಕೂ ರಸ್ತೆ ಬಂದ್ ಮಾಡಬಾರದು ಎಂದು ಒತ್ತಾಯಿಸಿದ್ದೆ. ಏಕೆಂದರೆ, ರಸ್ತೆ ಕಾಮಗಾರಿ ಇನ್ನೂ ನಿರೀಕ್ಷೆಯಷ್ಟು ಮುಗಿದಿಲ್ಲ. ವಾಹನ ಓಡಾಟ ಬಂದ್ ಮಾಡಿದರೂ ಏಳು ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ ಎಂದರು.
ಸಭೆಯಲ್ಲಿದ್ದ ಪ್ರಮುಖರೊಬ್ಬರು ಮಾತನಾಡಿ, ಶಿರಸಿ ಜಾತ್ರೆ ಈ ಬಾರಿ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತದ ಭಕ್ತರು ಅದಕ್ಕೆ ಬರಲಿದ್ದು, ತೀವ್ರ ಸಮಸ್ಯೆ ಉಂಟಾಗಲಿದೆ ಎಂದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಂಪಂ ಸಿಇಒ ಈಶ್ವರ ಕಾಂದೂ ಇತರರು ಇದ್ದರು.
ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766 ಇ ವಿಸ್ತರಣೆ ಕಾರ್ಯ ನಡೆಯುತ್ತಿದ್ದು, ರಸ್ತೆ, ಸೇತುವೆ ನಿರ್ಮಾಣಕ್ಕಾಗಿ ನವೆಂಬರ್ 1 ರಿಂದ 2024 ರ ಮೇ 31 ರವರೆಗೆ ರಸ್ತೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರ ಬಂದ್ ಮಾಡಲಾಗುವುದು ಎಂದು ಶಿರಸಿ ಎಸಿ ದೇವರಾಜ್ ಅವರು ಸಭೆ ನಡೆಸಿ ಪ್ರಕಟಣೆ ನೀಡಿದ್ದರು. ನಂತರ ಸಭೆ ನಡೆಸಿದ್ದ ಭೀಮಣ್ಣ ನಾಯ್ಕ ಸ್ಥಳೀಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದರು.