ಶಿರಸಿ: ಇಲ್ಲಿನ ಆಡಳಿತ ಸೌಧದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯ ಮೇಲೆ ಶುಕ್ರವಾರ ಸಾಯಂಕಾಲ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣ ಪಡೆಯುತ್ತಿದ್ದ ಉಪ ನೋಂದಣಾಧಿಕಾರಿ ರಾಧಮ್ಮ ಎಂ.ವಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಉಪ ನೋಂದಣಾಧಿಕಾರಿ ರಾಧಮ್ಮ ಎಂ.ವಿ. ಜಗಜ್ಯೋತಿ ವೀರಶೈವ ಸಮಿತಿಗೆ ಸಂಬಂಧಿಸಿದ ಜಮೀನಿನ ಕಾಗದ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ 15 ಸಾವಿರ ರೂ. ಬೇಡಿಕೆಯಿಟ್ಟಿದ್ದು, ಶುಕ್ರವಾರ ದಾಸನಕೊಪ್ಪದ ಬಸವರಾಜ ನಂದಿಕೇಶ್ವರ ಮಠ 3000 ರೂ. ನೀಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ರಾಧಮ್ಮ ಎಂ.ವಿ ಅವರನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆಯೂ ಈಕೆ ಸಾಕಷ್ಟು ಜನರ ಬಳಿ ಹಣದ ಬೇಡಿಕೆಯಿಟ್ಟು ಪೀಡಿಸುತ್ತಿದ್ದಳು ಎಂಬ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಅಲ್ಲದೇ, ಕೆಲ ದಿನಗಳ ಹಿಂದೆ ಶಾಸಕ ಭೀಮಣ್ಣ ನಾಯ್ಕ ಕೂಡ ಇವರಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಬಸವರಾಜ ನಂದಿಕೇಶ್ವರ ಮಠ ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್.ಪಿ ಕುಮಾರ ಚಂದ್, ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಫಿಕ್ ಖಾನ್, ಪ್ರದೀಪ ರಾಣೆ, ಗಜೇಂದ್ರ ಪೂಜಾರಿ, ಶಿವಕುಮಾರ ನಾಯ್ಕ, ಆನಂದ ರಾಮಾಪುರ, ಶ್ರೀಕೃಷ್ಣ ಬಾಳೆಗದ್ದೆ, ಸತೀಶ ಪಟಗಾರ, ಮಂಜುನಾಥ ಮಡಿವಾಳ, ಮಹೇಶ ನಾಯಕ, ಸಂಜೀವ ಗುರವ, ಮೆಹಬೂಬ ಅಲಿ ಹಾಗೂ ನಾರಾಯಣ ನಾಯ್ಕ ಕಾರ್ಯಾಚರಣೆಯಲ್ಲಿ ಇದ್ದರು.