ಅಂಕೋಲಾ: ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿ ಎಂದು ಹೇಳಿಕೊಂಡು, ಮೊಬೈಲ್ ಮೂಲಕ ಜೀವ ಬೆದರಿಕೆ ಹಾಗೂ ಬ್ಲಾಕಮೇಲ್ ಮಾಡಿದ ಪ್ರಕರಣ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವಂದಿಗೆಯ ರಮೇಶ ನಾರಾಯಣ ನಾಯಕ ಅವರು ಬ್ಲಾಕಮೇಲ್ ಹಾಗೂ ಜೀವ ಬೆದರಿಕೆಗೆ ಒಳಗಾಗಿದ್ದು, ತಮಗೆ ಸೂಕ್ತ ರಕ್ಷಣೆ ನೀಡಿ, ಕಾನೂನು ಕ್ರಮ ಜರುಗಿಸುವಂತೆ ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿರುವ ವಂದಿಗೆಯ ರಮೇಶ ನಾರಾಯಣ ನಾಯಕ ಅವರು ಇತ್ತೀಚಿಗೆ ಅಪಘಾತಗೊಂಡು ಮಂಗಳೂರಿನ ತೇಜಸ್ವಿನಿ ಆಸ್ಪತ್ತೆಯಲ್ಲಿ ಚಿಕಿತ್ಸೆಯನ್ನು ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಹೀಗೆ ಮನೆಯಲ್ಲಿ ವಿಶ್ರಾಂತಿಯಲ್ಲಿರುವ ರಮೇಶ ನಾಯಕ ಅವರಿಗೆ 23-10-2003 ರ ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮೊಬೈಲ್ ಕರೆ ಬಂದಿದೆ. ರಮೇಶ ನಾಯಕ ಅವರು ಕರೆಯನ್ನು ಸ್ವೀಕರಿಸಿದಾಗ ಇಂಗ್ಲೀಷ್‌ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ ನನಗೆ ಇಂಗ್ಲೀಷ್ ಬರುವುದಿಲ್ಲ ಎಂದು ಹೇಳಿ ಮೋಬೈಲನ್ನು ರಮೇಶ ನಾಯಕ ಅವರ ಮಗನ ಬಳಿ ನೀಡಿದ್ದಾರೆ. ಕರೆ ಮಾಡಿದ ವ್ಯಕ್ತಿ ರಮೇಶ ನಾಯಕ ಅವರ ಮಗನನ್ನು ಉದ್ದೇಶಿಸಿ ಇಂಗ್ಲೀಷ್‌ನಲ್ಲಿ ರಮೇಶ್ ನಾಯಕ ಮನೆಯಲ್ಲಿ ಇದ್ದಾರೆಯೇ ಎಂದು ಕೇಳಿದ್ದಾರೆ. ನಾವು ಸಿಬಿಐನವರು ನಾವು ನಿಮ್ಮ ಮನೆಗೆ ಇನ್‌ವೆಸ್ಟಿಗೇಶನ್ ಮಾಡಲು ಬರುತ್ತಿದ್ದೇವೆ.
ನಿಮ್ಮ ತಂದೆಗೆ ಮನೆಯಿಂದ ಹೊರಬಾರದು ಎಂದು ತಿಳಿಸು, ನಿಮ್ಮ ಮನೆಯ ಲೊಕೇಶನ್ ಎಲ್ಲಿದೆ ಎಂದು ಕೇಳಿದ್ದಾರೆ. ಆಗ ನಾವು ವಂದಿಗೆ ಗ್ರಾಮದಲ್ಲಿ ಇದ್ದೇವೆ ಎಂದು ತಿಳಿಸಿದ್ದಾರೆ ಮತ್ತು ನೀವು ಯಾವ ಇನ್‌ವೆಸ್ಟಿಗೇಶನ್ ಮಾಡುತ್ತಿದ್ದೀರಿ ಎಂದು ಕೇಳಿದಾಗ ಅದಕ್ಕೆ ಕರೆ ಮಾಡಿದ ವ್ಯಕ್ತಿ ಅದೆಲ್ಲ ನಿನಗೆ ಬೇಡ, ನಾವು ನಿಮ್ಮ ಮನೆಗೆ ಬರುತ್ತೇವೆ, ಈಗ ನಾವು ಕಾರವಾರದಲ್ಲಿ ಇದ್ದೇವೆ. ಈ ಮೊಬೈಲ್ ಕಾಲನ ಕುರಿತು ಪೊಲೀಸರಿಗಾಗಲಿ ಅಥವಾ ಬೇರೆ ಯಾರಿಗೊಬ್ಬರಿಗೂ ತಿಳಿಸ ಕೂಡದು ಎಂದು ಹೇಳಿ ಥಟ್ಟನೆ ಕಾಲ್ ಕಟ್ ಮಾಡಿದ್ದಾರೆ. ನಂತರದಲ್ಲಿ ಮತ್ತೆ ಸುಮಾರು ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಕಾಲ್ ಮಾಡಿ, ರಮೇಶ ನಾಯಕ ಅವರು ಮನೆಯಿಂದ ಹೊರಗೆ ಬರಬಾರದು ಎಚ್ಚರಿಕೆ ನೀಡಿ ಪೋನ್ ಮಾಡಿದ್ದಾರೆ.
ಪುನ: ಸಾಯಂಕಾಲ 5-10 ರ ಸುಮಾರಿಗೆ ಅದೇ ವ್ಯಕ್ತಿಯಿಂದ ಅದೇ ನಂಬರಿನಿಂದ ಕಾಲ್ ಬಂದಾಗ ರಮೇಶ ನಾಯಕನಿಗೆ ಮೊಬೈಲ್ ಕೊಡು, ನಾವು ರಮೇಶ ನಾಯಕನ ವಾಯ್ಸ್ ಕೇಳಬೇಕು, ರಮೇಶ್ ನಾಯಕನು 3 ರಿಂದ 4 ದಿನ ಮನೆಯಿಂದ ಹೊರಗೆ ಬರಬಾರದು. ಆತನಿಗೆ ಜೀವಕ್ಕೆ ಅಪಾಯ ಇದೆ ಎಂದು ಹೇಳಿದಾಗ, ನನ್ನ ತಂದೆಗೆ ಯಾರಿಂದ ಜೀವಕ್ಕೆ ಅಪಾಯವಿದೆ ಎಂದು ಕೇಳಿದಾಗ, ಅವರು ಅದನ್ನೆಲ್ಲ ತಿಳಿಸಲು ಬರುವುದಿಲ್ಲ, ನಿಮ್ಮ ಮನೆ ಅಗ್ರಿಕಲ್ಚರ್ ಆಫೀಸಿನ ಹತ್ತಿರವಿದೆಯಲ್ಲ, ನಾವು ಇಲ್ಲೇ ಇದ್ದೇವೆ, ನಮ್ಮ ನಂಬರಿಗೆ ಕಾಲ್ ಮಾಡಬೇಡ’ ಎಂತ ಹೇಳಿ ಕಾಲ್ ಕಟ್ ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ರಮೇಶ ನಾಯಕ ಅವರು ಉಲ್ಲೇಖಿಸಿದ್ದಾರೆ.
ಹವಾಲ್ದಾರ ಸುಧಾಕರ ಮಾದಪ್ಪ ಈ ಬಗ್ಗೆ ದೂರು ಪಡೆದು, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಸಿಪಿಐ ಸಂತೋಷ ಶೆಟ್ಟಿ ಅವರು ಪ್ರಕರಣವನ್ನು ಗಂಭೀರವಾಗಿ ತೆಗದುಕೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ರಮೇಶ ನಾಯಕ ಅವರು ಭ್ರಷ್ಟ ಅನೇಕ ಅಧಿಕಾರಿಗಳು ಲಂಚ ತೆಗೆದುಕೊಳ್ಳುತ್ತಿದ್ದಾಗ ಅವರನ್ನು ಲೋಕಾಯುಕ್ತದ ಬಲೆಗೆ ಬಿಳಿಸಿದ ಪ್ರಕರಣಗಳ ರೂವಾರಿಗಳು ಆಗಿದ್ದಾರೆ. ಕರೆ ಮಾಡಿದ ವ್ಯಕ್ತಿಯ ನಿಜವಾದ ಅಸಲಿಯತ್ತು ಏನು..? ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಯ ಅಸಲಿ ಮುಖವನ್ನು ಇನ್ನು ಕೇವಲ 2-3 ದಿನದಲ್ಲಿ ಬಯಲಿಗೆಳೆಯುತ್ತೇವೆ ಎಂದು ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ.