ಕುಮಟಾ: ಅಮಾಯಕ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಗಜು ನಾಯ್ಕ ಅಳ್ವೆಕೋಡಿಯವರನ್ನು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಮುಂದಿನ ಆದೇಶದವರೆಗೆ ಅಮಾನತು ಮಾಡಿ ಆದೇಶಿಸಿದೆ.
ಅಳ್ವೆಕೋಡಿಯ ಹುಂಡೈ ಶೋರೂಂನಲ್ಲಿ ಅಮಾಯಕ ಯುವಕನಿಗೆ ಗಜು ನಾಯ್ಕ ಥಳಿಸಿದ ಮತ್ತು ಮಹಿಳೆಯಿಂದ ಆತನಿಗೆ ಚಪ್ಪಲಿಯಿಂದ ಹೊಡೆಸಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಗಾಗಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲೂ ಈ ಬಗ್ಗೆ ಸುದ್ದಿ ಬಿತ್ತರವಾಗಿತ್ತು.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಗಜು ನಾಯ್ಕ ಸೇರಿದಂತೆ ನಾಲ್ವರ ಮೇಲೆ ಎಫ್ಐಆರ್ ಕೂಡ ದಾಖಲಾಗಿತ್ತು. ಅಲ್ಲದೇ ಅಳ್ವೆಕೋಡಿ ಜನ ಕೂಡ ಈ ಹಲ್ಲೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಪಕ್ಷದಿಂದ ಗಜು ನಾಯ್ಕರನ್ನು ಉಚ್ಛಾಟಿಸುವಂತೆ ಆಗ್ರಹಿಸಿದ್ದರು. ಈ ಘಟನೆಯಿಂದ ಪಕ್ಷಕ್ಕೆ ಮುಜುಗರವಾಗಿತ್ತು. ಅಲ್ಲದೇ ಇವರ ವಿರುದ್ಧ ಪಕ್ಷಕ್ಕೆ ದೂರು ಕೂಡ ಸಲ್ಲಿಕೆಯಾಗಿತ್ತು.
ಈ ಪ್ರಕರಣದ ಬಗ್ಗೆ ಕುಲಂಕುಷವಾಗಿ ಪರಿಶೀಲಿಸಿದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಅವರು, ಗಜು ನಾಯ್ಕರನ್ನು ಪಕ್ಷದ ನೀಡಿದ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.