ಮುಂಡಗೋಡ: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದ್ದು ಇದೀಗ ಕಳೆದ ಬಾರಿ ಕಾಂಗ್ರೆಸ್ನಿ0ದ ಬಿಜೆಪಿ ಸೇರಿದ್ದ ಶಿವರಾಮ್ ಹೆಬ್ಬಾರ್ ಸೇರಿ ಅತೃಪ್ತ ಶಾಸಕರಿಗೆ ಈ ಮೈತ್ರಿ ನುಂಗಲಾರದ ತುತ್ತಾಗಿದೆ.
2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಬಿಜೆಪಿ ಬಹುಮತದ ಹತ್ತಿರ ಬಂದಿದ್ದರು ಶಾಸಕರ ಸಂಖ್ಯೆ 113 ತಲುಪದ ಹಿನ್ನಲೆಯಲ್ಲಿ ಸರ್ಕಾರ ಮಾಡಲು ಆಗಿರಲಿಲ್ಲ. ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದು ಹೆಚ್ ಡಿ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ಇನ್ನು ಸರ್ಕಾರ ಇದ್ದ ವೇಳೆಯಲ್ಲಿ ಕಾಂಗ್ರೆಸ್ ನಲ್ಲಿದ್ದ ಅಂದಿನ ಯಲ್ಲಾಪುರ ಕ್ಷೇತ್ರದ ಶಾಸಕರಾಗಿದ್ದ ಶಿವರಾಮ್ ಹೆಬ್ಬಾರ್ ಸೇರಿ ಹಲವರು ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸುತ್ತಾ ಇದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿಯೇ ಚುನಾವಣೆ ಎದುರಿಸಿತ್ತು. ಈ ವೇಳೆ ರಾಜ್ಯದಲ್ಲಿ ಮೈತ್ರಿ ಪಕ್ಷ ಹೀನಾಯವಾಗಿ ಸೋಲನ್ನ ಕಂಡಿತ್ತು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬಿಟ್ಟುಕೊಡಲಾಗಿತ್ತು. ಮೈತ್ರಿ ಅಭ್ಯರ್ಥಿಯಾಗಿ ಆನಂದ್ ಅಸ್ನೋಟಿಕರ್ ಕಣಕ್ಕೆ ಇಳಿದಿದ್ದರು ಕಾಂಗ್ರೆಸ್ ನಲ್ಲಿ ಶಾಸಕರಾಗಿದ್ದ ಶಿವರಾಮ್ ಹೆಬ್ಬಾರ್ ತಮ್ಮ ಅಸಮಾಧಾನದಿಂದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ ಎನ್ನುವ ಆರೋಪಕ್ಕೆ ತುತ್ತಾಗಿದ್ದರು. ಲೋಕಸಭಾ ಚುನಾವಣೆ ಮುಗಿದು ಕೆಲವೇ ತಿಂಗಳಿನಲ್ಲಿ ಎರಡು ಪಕ್ಷದಲ್ಲಿ ಬಿರುಕು ಮೂಡಿತ್ತು. ಹೆಬ್ಬಾರ್ ಸೇರಿ ಹಲವು ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಜೆಡಿಎಸ್ ಜೊತೆ ಮೈತ್ರಿ ತಮಗೆ ಇಷ್ಟವಿಲ್ಲ. ಮೈತ್ರಿಯಿಂದಲೇ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ತಮ್ಮ ಯಾವ ಕೆಲಸ ಆಗುತ್ತಿಲ್ಲ ಎನ್ನುವ ಅಸಮಾಧಾನವನ್ನ ಹೆಬ್ಬಾರ್ ಸೇರಿ ಎಲ್ಲಾ ಶಾಸಕರು ವ್ಯಕ್ತಪಡಿಸಿಯೇ ಪಕ್ಷ ತೊರೆದು ಬಿಜೆಪಿ ಸೇರಿ ನಂತರ ಉಪಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗಿದ್ದರು.
2023ರ ಚುನಾವಣೆಯಲ್ಲಿ ಅತೃಪ್ತ ಶಾಸಕರು ಹಲವರು ಸೋಲನ್ನ ಕಂಡಿದ್ದರೇ ಶಿವರಾಮ್ ಹೆಬ್ಬಾರ್, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಸೇರಿ ಹಲವರು ಆಯ್ಕೆಯಾಗಿದ್ದಾರೆ. ಇದೀಗ ತಾವು ಇರುವ ಬಿಜೆಪಿ ಪಕ್ಷ ಅಂದು ವಿರೋಧ ಮಾಡಿದ್ದ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಲೋಕಸಭಾ ಚುನಾವಣೆ ಎದುರಿಸಲು ಮುಂದಾಗಿದೆ. ಶಿವರಾಮ್ ಹೆಬ್ಬಾರ್ ಸೇರಿ ಅತೃಪ್ತ ಶಾಸಕರು ಅನಿವಾರ್ಯವಾಗಿ ಜೆಡಿಎಸ್ ಪರ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಂದು ವಿರೋಧ ಮಾಡಿದ್ದ ಪಕ್ಷದ ಜೊತೆಯೇ ಇಂದು ಬಿಟ್ಟು ಬಂದು ಸೇರಿದ ಪಕ್ಷ ಮೈತ್ರಿ ಮಾಡಿಕೊಂಡಿರುವುದರಿAದ ನುಂಗಲಾರದ ತುತ್ತಾಗಿದ್ದು ಮತ್ತೆ ಅತೃಪ್ತ ಶಾಸಕರ ಅಸಮಾಧಾನ ಹೊರ ಬೀಳುವ ಸಾಧ್ಯತೆ ಇದೆ.