ಟನಲ್ ಪ್ರಾರಂಭಿಸಿ, ಇಲ್ಲದಿದ್ದರೆ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ: ಉಳ್ವೇಕರ್
ಕಾರವಾರ: ಸೆ.29ರ ಒಳಗೆ ಜಿಲ್ಲಾಡಳಿತ ಮಾತುಕತೆ ನಡೆಸಿ ನಗರದಲ್ಲಿ ಹಾದುಹೋಗಿರುವ ಟನಲ್ನಲ್ಲಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಅಂದೇ ಪ್ರತಿಭಟನೆ ಮಾಡಿ ಟನಲ್ನಲ್ಲಿ ಓಡಾಡುವುದಕ್ಕೆ ಸಾರ್ವಜನಿಕರೇ ಪ್ರಾರಂಭ ಮಾಡಲಿದ್ದು, ಏನಾದರು ಅನಾಹುತವಾದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕಾಗಿ ನಿರ್ಮಿಸಿದ್ದ ಸುರಂಗ ಮಾರ್ಗದಲ್ಲಿ ಸಾರ್ವಜನಿಕರಿಗೆ ಓಡಾಡಲು ಹಲವು ದಿನಗಳಿಂದ ಬಿಡದೇ ಜಿಲ್ಲಾಡಳಿತ ಮಾಡುತ್ತಿರುವ ವರ್ತನೆಗೆ ಸಾರ್ವಜನಿಕರ ಖಂಡನೆ ಇದೆ ಎಂದು ಕಿಡಿಕಾರಿದರು. ಟನಲ್ ಪ್ರಾರಂಭ ಮಾಡಲು ಇನ್ನೂ ಫಿಟ್ ನೆಸ್ ಸರ್ಟಿಫಿಕೇಟನ್ನ ಐ.ಆರ್.ಬಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿಲ್ಲ ಎಂದು ಸುಳ್ಳು ಹೇಳಲಾಗುತ್ತಿದೆ. ಪುನಾದ ಖಾಸಗಿ ಸಂಸ್ಥೆಯೊAದು ಈಗಾಗಲೇ ಫಿಟ್ ನೆಸ್ ಸರ್ಟಿಫಿಕೇಟನ್ನ ನೀಡಿದೆ. ಇದೇ ಫಿಟ್ ನೆಸ್ ಸರ್ಟಿಫಿಕೇಟನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಪರಿಶೀಲಿಸಿ ಎರಡು ತಿಂಗಳ ಹಿಂದೆಯೇ ಟನಲ್ ಫಿಟ್ ನೆಸ್ ಇದ್ದು ಜನರು ಒಡಾಡಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ.
ಪೂಣಾದಿಂದ ಪರಿಣಿತ ತಂಡದವರು ಆಗಮಿಸಿ ಫಿಟ್ ನೆಸ್ ಪರೀಕ್ಷಿಸಿ ಪ್ರಾರಂಭ ಮಾಡುವಂತೆ ಪತ್ರ ಜಿಲ್ಲಾಡಳಿತಕ್ಕೆ ಜುಲೈ ತಿಂಗಳಿನಲ್ಲಿಯೇ ನೀಡಿದ್ದಾರೆ. ಆದರೆ ಇನ್ನೂ ಸರ್ಟಿಫಿಕೇಟನ್ನೇ ನೀಡಿಲ್ಲ ಎಂದು ಟನಲ್ ನಲ್ಲಿ ಓಡಾಡಲು ಅವಕಾಶ ಮಾಡಿಕೊಡದೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರಾಜಕೀಯ ಮಾಡಲು ಹೊರಟಿದ್ದಾರೆ. ಸದಾಶಿವಗಡದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕಾಗಿ ಕಾಳಿ ನದಿಯಲ್ಲಿ ಸೇತುವೆಯನ್ನ ಐಆರ್.ಬಿ ಕಂಪನಿ ನಿರ್ಮಿಸಿದೆ. ಇದನ್ನೂ ಸಹ ಪುನಾದ ಸಂಸ್ಥೆಯಿ0ದ ಪರಿಶೀಲಿಸಿ ಒಡಾಡಲು ಜನರಿಗೆ ಅವಕಾಶ ಮಾಡಿಕೊಡಲಾಯಿತು. ಅಲ್ಲಿ ಯಾಕೆ ಈ ಜನಪ್ರತಿನಿಧಿಗಳು ತಕಾರಾರು ಎತ್ತಿಲ್ಲ. ಟನಲ್ ನಲ್ಲಿ ಮಾತ್ರ ತಕರಾರು ಎತ್ತಲು ಕಾರಣವೇನು ಎಂದು ಉಳ್ವೇಕರ್ ಹೇಳಿದ್ದಾರೆ.
ಈಗ ಟನಲ್ ರಾಜಕೀಯ ಕಾರಣದಿಂದ ಸಂಸ್ಥೆ ಫಿಟ್ ನೆಸ್ ಸರ್ಟಿಫಿಕೇಟ್ ನೀಡಿದರು ಇನ್ನೂ ಪ್ರಾರಂಭ ಮಾಡಿಲ್ಲ. ಟನಲ್ ಪ್ರಾರಂಭ ಮಾಡದ ಕಾರಣ ಬಿಣಗಾದ ಬಳಿ ಅಪಘಾತಗಳಾಗಿ ಈಗಾಗಲೇ ಒಬ್ಬರು ಮೃತಪಟ್ಟಿದ್ದಾರೆ. ಇನ್ನೂ ಟನಲ್ ಪ್ರಾರಂಭಕ್ಕೆ ಮೀನಾಮೇಷಾ ಮಾಡದೇ ಟನಲ್ ಪ್ರಾರಂಭಿಸಲು ಕ್ರಮವನ್ನ ಜಿಲ್ಲಾಡಳಿತ ಕೈಗೊಳ್ಳಬೇಕು. ಇಲ್ಲದಿದ್ದರೆ ಸೆ.29ರಂದು ಸಾರ್ವಜನಿಕರೇ ಟನಲ್ ಪ್ರಾರಂಭ ಮಾಡುವುದು ಖಚಿತ ಎಂದು ಉಳ್ವೇಕರ್ ಹೇಳಿದ್ದಾರೆ.
ನಗರಸಭೆ ಮಾಜಿ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ಟನಲ್ ಮೊದಲು ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲ ಎಂದು ಬಂದ್ ಮಾಡಿದಾಗ ಕೆಲವೇ ದಿನದಲ್ಲಿ ಫಿಟ್ ನೆಸ್ ಸರ್ಟಿಫಿಕೇಟ್ ಪಡೆದು ಪ್ರಾರಂಭ ಮಾಡುತ್ತಾರೆ ಎಂದು ಕಾದಿದ್ದೆವು. ಆದರೆ ಇದು ಅತಿಯಾಗಿದ್ದು ಇನ್ನೂ ಪ್ರಾರಂಭ ಮಾಡದೇ ಇದ್ದಿದ್ದರಿಂದ ಹೋರಾಟದ ಮೂಲಕ ಪ್ರಾರಂಭ ಮಾಡುವುದಕ್ಕೆ ಮುಂದಾಗಲಿದ್ದೇವೆ ಎಂದರು.