ಸಿದ್ದಾಪುರ: ಕನ್ನಡ, ಕನ್ನಡಿಗ, ಕರ್ನಾಟಕ ನಮ್ಮ ಅಸ್ಮಿತೆ. ಕನ್ನಡ ಸಾಹಿತ್ಯ ಪರಿಷತ್ನ ನಿಬಂಧನೆ ಕೂಡ ಕಸಾಪ ರಾಜ್ಯಾಧ್ಯಕ್ಷನಾದ ನನಗೆ ಸಂವಿಧಾನ. ಆ ನಿಬಂಧನೆಯ ಪ್ರಕಾರ ಕನ್ನಡ ಭಾಷೆ, ಕಲೆ, ಸಂಸ್ಕೃತಿಯ ರಕ್ಷಣೆ, ಅಭಿವೃದ್ಧಿ ನನ್ನ ಕರ್ತವ್ಯ. ಆ ಕುರಿತಾದ ಯಾವುದೇ ಕಾರ್ಯಕ್ಕೂ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲು ನಾನು ಬದ್ಧ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಹೇಳಿದರು.
ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ನವೆಂಬರ್ 17ನೇ ತಾರೀಕು ಬೆಂಗಳೂರಿನ ಕಸಾಪದ ಆವರಣದಲ್ಲಿ ಕನ್ನಡ ದೇವತೆ ಎಂದು ಎಲ್ಲ ಕನ್ನಡಿಗರೂ ಭಾವಿಸುವ ಭುವನೇಶ್ವರಿ ದೇವಿಯ ಪುತ್ಥಳಿಯನ್ನು ಆಗಿನ ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ನಂತರ ಆ ಬಗ್ಗೆ ಒಂದು ಸಂಸ್ಥೆ ಹಾಗೂ ಇಬ್ಬರು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬಿತ್ತರಿಸಿದರು. ಅದಕ್ಕೆ ನೀವು ಮಾಡುತ್ತಿರುವದು ಸರಿಯಲ್ಲ. ಕನ್ನಡಿಗರ ಭಾವನೆಗೆ ಧಕ್ಕೆ ತರುವದರ ಜೊತೆಗೆ ಕೋಮು ಸೌಹಾರ್ದ ಕದಡುವಂಥದ್ದು ಎಂದು ತಿಳುವಳಿಕೆ ಪತ್ರ ಕೊಟ್ಟೆ. ಅದರ ನಡುವೆ ಅನೇಕರು ಕಾನೂನು ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದರು.
ಈ ನಡುವೆ ಸಿದ್ದಾಪುರದ ನಾಗರಾಜ ಭಟ್ಟ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಭುವನೇಶ್ವರಿ ದೇವಿಯ ಉಲ್ಲೇಖ ಮುಂತಾದ ದಾಖಲೆಗಳನ್ನು ಮಾಹಿತಿ ಹಕ್ಕಿನಡಿ ಕೇಳಿ ಪಡೆದು ನ್ಯಾಯಾಲಯದಲ್ಲಿ ಆ ವ್ಯಕ್ತಿಗಳ ಹೇಳಿಕೆಗಳ ವಿರುದ್ಧ ದಾವೆ ಹೂಡಿದ್ದು, ರವಿ ಹೆಗಡೆ ಹೂವಿನಮನೆ ವಕೀಲರಾಗಿದ್ದಾರೆ. ಆ ಕುರಿತಂತೆ ನ್ಯಾಯಾಲಯದಲ್ಲಿ ದಾವೆ ಪ್ರಾರಂಭವಾಗಿದ್ದು, ನಾನು ಇಂದು ಸಾಕ್ಷಿಯಾಗಿ ಪಾಲ್ಗೊಂಡಿದ್ದೇನೆ. ಆ.16ರಂದು ದಾವೆ ಪುನಃ ಮುಂದುವರಿಯುತ್ತದೆ. ನಾನು ಈ ಸಂಬ0ಧ ಕಸಾಪ ಕಾರ್ಯಕಾರಿಣಿ ಹಾಗೂ ಮಹಾಸಭೆಯ ಅನುಮೋದನೆ ಪಡೆದುಕೊಂಡಿದ್ದೇನೆ ಎಂದರು.
ದಾವೆ ಹೂಡಿರುವ ನಾಗರಾಜ ಭಟ್ಟ ಕೆಕ್ಕಾರ ಮಾತನಾಡಿ, ಭುವನೇಶ್ವರಿ ದೇವಿಯ ಕುರಿತಾದ ಹೇಳಿಕೆಗಳಿಂದ ನಾನೂ ಸೇರಿದಂತೆ ಅನೇಕ ಭಕ್ತರಿಗೆ ನೋವಾಗಿದೆ.ಇತಿಹಾಸ ಇರುವ ದೇವಿಯ ಬಗ್ಗೆ ಟೀಕೆ ಬಂದರೆ ಸಹಿಸಲು ಸಾಧ್ಯವಿಲ್ಲ. ಆ ಕಾರಣದಿಂದ ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದೇನೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಕೀಲ ರವಿ ಹೆಗಡೆ ಹೂವಿನಮನೆ ಉಪಸ್ಥಿತರಿದ್ದರು.