ದಾಂಡೇಲಿ : ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭೀಕರ ಮಳೆಯಿಂದಾಗಿ ಮನೆ ಹಾನಿಯಾಗಿ ನಷ್ಟವನ್ನು ಅನುಭವಿಸಿದ ಸಂತ್ರಸ್ತರಿಗೆ ನಗರ ಸಭೆಯ ಸಭಾಭವನದಲ್ಲಿ ಪರಿಹಾರದ ಆದೇಶ ಪತ್ರವನ್ನು ಶಾಸಕರಾದ ಆರ್.ವಿ.ದೇಶಪಾಂಡೆಯವರು ವಿತರಿಸಿದರು.
ಮಳೆ ಹಾನಿಯಿಂದ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿರುವ ತಾಲ್ಲೂಕಿನ ಒಟ್ಟು 21 ಮನೆಗಳಿಗೆ ತಲಾ ರೂ:5,000/- ದಂತೆ ಒಟ್ಟು 43 ಕುಟುಂಬಗಳಿಗೆ ಮತ್ತು ಮೂರು ಭಾಗಶ: ಹಾಗೂ ಒಂದು ಸಂಪೂರ್ಣ ಕುಸಿದ ಮನೆಗೆ ಹೀಗೆ ಒಟ್ಟು 4 ಕುಟುಂಬಗಳಿಗೆ ಒಟ್ಟು ರೂ: 1,37,000/- ಪರಿಹಾರದ ಧನದ ಆದೇಶ ಪತ್ರವನ್ನು ವಿತರಿಸಲಾಯಿತು. ಮೊಸಳೆ ದಾಳಿಗೊಳಗಾಗಿ ಮೃತಪಟ್ಟ ಪೀತಾಂಬರದಾಸ್ ಮಹೇಶ್ವರಿ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ರೂ:7,50,000/- ಪರಿಹಾರ ಧನದ ಚೆಕ್ ಹಾಗೂ ಮೊಸಳೆ ದಾಳಿಗೊಳಗಾಗಿ ಮೃತಪಟ್ಟ 4 ಕುಟುಂಬಗಳಿಗೆ ರೂ:4000/-ದಂತೆ ಮಾಸಾಶನದ ಮಂಜೂರಾತಿ ಆದೇಶ ಪತ್ರವನ್ನು ಆರ್.ವಿ.ದೇಶಪಾಂಡೆಯವರು ವಿತರಿಸಿದರು.
ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಸಮಸ್ಯೆಗೆ ಸ್ಪಂದಿಸುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಮಳೆ ಹಾನಿಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಅತೀ ತ್ವರಿತಗತಿಯಲ್ಲಿ ಪರಿಹಾರವನ್ನು ಒದಗಿಸುವ ಕಾರ್ಯವನ್ನು ರಾಜ್ಯ ಸರಕಾರ ಮಾಡುತ್ತಿದೆ. ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕರ‍್ಯ ನಿರ್ವಹಿಸಬೇಕೆಂದು ಆರ್.ವಿ.ದೇಶಪಾಂಡೆಯವರು ಹೇಳಿದರು.
ವೇದಿಕೆಯಲ್ಲಿ ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಚ್.ಬಾಲಚಂದ್ರ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮ್ಮನವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆರ್.ಹೆಗಡೆ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ತಹಶೀಲ್ದಾರ್ ಕಚೇರಿ ಮತ್ತು ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.