ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರೊಂದಿಗೆ ಜುಲೈ 15, ಶನಿವಾರದಂದು ಕಾರವಾರದಲ್ಲಿ ಅರಣ್ಯವಾಸಿಗಳೊಂದಿಗೆ ಸಮಾಲೋಚನೆ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ್ ಅಧ್ಯಕ್ಷತೆಯಲ್ಲಿ ಜರುಗಿದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಈ ವಿಷಯವನ್ನು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.
ಇತ್ತಿಚಿಗೆ ಅರಣ್ಯವಾಸಿಗಳ ಮೇಲೆ ಜರುಗುವ ದೌರ್ಜನ್ಯ, ಮಂಜೂರಿ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಸಮಸ್ಯೆ, ಅರಣ್ಯ ಹಕ್ಕು ಕಾಯಿದೆಯ ಅನುಷ್ಟಾನಕ್ಕಿರುವ ಸಮಸ್ಯೆಗಳ ಕುರಿತು ಉಸ್ತುವಾರಿ ಸಚಿವ ಹಾಗೂ ಜಿಲ್ಲೆಯ ಪ್ರತಿನಿಧಿಯೊಂದಿಗೆ ಸಮಾಲೋಚಿಸಲಾಗುವುದೆಂದು ಸಭೆಯಲ್ಲಿ ಚರ್ಚಿಸಲಾಯಿತು.
ಆಸಕ್ತ ಅರಣ್ಯವಾಸಿಗಳು ಜುಲೈ 15, ಶನಿವಾರ ಮಧ್ಯಾಹ್ನ 12.30 ಕ್ಕೆ ಜಿಲ್ಲಾಧಿಕಾರಿ ಕಾರವಾರ ಕಚೇರಿಯ ಆವರಣಕ್ಕೆ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಎಮ್ಆರ್ ನಾಯ್ಕ ಕಂಡ್ರಾಜಿ, ನೆಹರೂ ನಾಯ್ಕ ಬಿಳೂರು, ಲಕ್ಷ್ಮಿಕಾಂತ ನಾಯ್ಕ ಕರ್ಕೊಳ್ಳಿ, ಚಂದ್ರು ನಾಯ್ಕ ಮರಗುಂಡಿ ಮುಂತಾದವರು ಮಾತನಾಡಿದರು. ಸಭೆಯಲ್ಲಿ ದುಗ್ಗ ಮರಾಠಿ, ಫಾತಿಮಾ ಪಠಾಣ, ಮರಿಯಾ ಪಿಂಟು, ಚಂದ್ರು ಶಾನಭಾಗ, ಚೈತ್ರಾ ರೋಡ್ರಿಗಸ್, ಬಾಬುಜಿ ಚೇನು ಮರಾಠಿ, ಸಾವಿತ್ರಿ ಇಳಿಗೇರ್, ಲಿಂಗಯ್ಯ ದೇವಾಡಿಗ, ಅಖಿಲಾ ರಾಜೇಸಾಬ, ಶಂಕರ್ ಗೌಡ, ಚಂದ್ರು ಆರ್ ನಾಯ್ಕ, ಮಾಬ್ಲಾ ಪೂಜಾರಿ, ರಾಮಚಂದ್ರ ದೇವಾಡಿಗ, ಟಿಕ್ರು ಮರಾಠಿ ಮುಂತಾದವರು ಉಪಸ್ಥಿತರಿದ್ದರು.
ಮನೋಪ್ರವೃತ್ತಿ ಬದಲಾಯಿಸಿ:
ರಾಜ್ಯದಲ್ಲಿ ಸರಕಾರ ಬದಲಾಗಿದೆ. ಕಾನೂನು ಮತ್ತು ಸರಕಾರ ಅರಣ್ಯವಾಸಿಗಳ ಪರವಾಗಿದೆ. ಅರಣ್ಯವಾಸಿಗಳ ಮೇಲೆ ದೌರ್ಜನ್ಯವೆಸಗುವ ಅರಣ್ಯ ಸಿಬ್ಬಂದಿಗಳ ಮನೋಪ್ರವೃತ್ತಿ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ, ಅಂತಹ ಸಿಬ್ಬಂದಿಗಳ ವಿರುದ್ಧ ತೀವ್ರ ತರದ ಹೋರಾಟ ಜರುಗಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.