ಯಲ್ಲಾಪುರ: ಸರ್ಕಾರದ ಮಹತ್ವಾಕಾಂಕ್ಷೆಯ ಎರಡನೇ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಜನತೆಯ ಪರವಾದ ಯೋಜನೆಯಾಗಿದ್ದು, ಸ್ಥಳೀಯ ಸೇವಾ ಕೇಂದ್ರದ ಮೂಲಕ ತಮ್ಮ ದಾಖಲೆಗಳನ್ನು ಹಾಜರುಪಡಿಸಿ ನೋಂದಾಯಿಸಿಕೊ0ಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಟಿ.ಸಿ.ಗಾಂವ್ಕಾರ ಅಭಿಪ್ರಾಯಪಟ್ಟರು.
ವಜ್ರಳ್ಳಿಯ ಗ್ರಾಮ ಪಂಚಾಯತ ಆವರಣದಲ್ಲಿ ಹೆಸ್ಕಾಂನ ಅಧಿಕಾರಿಗಳು ಸಾರ್ವಜನಿಕರಿಗಾಗಿ ಹಮ್ಮಿಕೊಂಡ ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್‌ನ ಗ್ರಾಹಕರ ನೋಂದಣಿಯ ಕುರಿತಾದ ಮಾಹಿತಿಯ ಫೋಸ್ಟರ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಜನರ ಬದುಕಿನ ಮೂಲಭೂತ ಆಶಯಗಳನ್ನು ಈಡೇರಿಸಲು ಸರ್ಕಾರ ಕಟಿಬದ್ಧವಾಗಿದೆ. ಉಚಿತ ಸೇವೆ ಪಡೆಯುವುದ ಜೊತೆಗೆ ಇಂಧನ ಉಳಿತಾಯದ ಬಗೆಗೂ ಕಾಳಜಿವಹಿಸೋಣ. ಗೃಹಬಳಕೆಯ ಗ್ರಾಹಕರಿಗೆ ಮಾಸಿಕ 200 ಯುನಿಟ್ ಉಚಿತ ವಿದ್ಯುತ್ ನೀಡಿರುವುದು ಜನಜೀವನದ ಮೇಲೆ ಸರ್ಕಾರ ಇಟ್ಟಿರುವ ಕಾಳಜಿಯಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಹೆಸ್ಕಾಂನ ಪವರ್ ಮ್ಯಾನ್ ಸುರೇಂದ್ರ ಜೋಗಳೇಕರ್, ಸಹಾಯಕ ಪವರ್‌ಮ್ಯಾನ್ ಪರಶುರಾಮ ಕಾಳೆ, ಕಿರಿಯ ಪವರ್‌ಮ್ಯಾನ್ ಕೃಷ್ಣಸಿಂಗ್ ರೆಡ್ಡಿ, ಗ್ಯಾಂಗ್‌ಮೆನ್ ಮುನ್ನಾ ವಜ್ರಳ್ಳಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ನಂತರ ಹೆಸ್ಕಾಂನ ಅಧಿಕಾರಿಗಳು ವಜ್ರಳ್ಳಿಯ ಗ್ರಾಮ ಪಂಚಾಯತದ ವಿವಿಧ ಸಂಘ- ಸಂಸ್ಥೆ, ಹಾಗೂ ಸ್ಥಳೀಯ ಗ್ರಾಮಗಳ ಗ್ರಾಹಕರ ಮನೆಗಳಿಗೆ ತೆರಳಿ ನೋಂದಣಿಯ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.