ಶಿರಸಿ: ಹೆಣವನ್ನು ತಕ್ಷಣ ಕೊಂಡೊಯ್ಯಿರೆಂಬ ಮಂಗಳೂರಿನ ಆಸ್ಪತ್ರೆಯ ಒತ್ತಾಯದಿಂದ ದಿಕ್ಕೆಟ್ಟವರಂತೆ ಆಗಿದ್ದ ಅಮ್ಮಚ್ಚಿಯ ಕುಟುಂಬಕ್ಕೆ ಶಾಸಕ ಭೀಮಣ್ಣ ನಾಯ್ಕ್ ನೆರವಾದ ಘಟನೆ ವರದಿಯಾಗಿದೆ.
ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಿರಸಿ ತಾಲೂಕಿನ ಗೋಳಿಯ ಸಮೀಪದ ಅಮ್ಮಚ್ಚಿಯ ಗಣೇಶ್ ಗಣಪ ಗೌಡ ಎನ್ನುವ 20 ವರ್ಷದ ಯುವಕ ಕಳೆದ ವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು.
ಹುಡುಗನ ದಿಢೀರ್ ಸಾವಿನಿಂದ ಕುಟುಂಬಸ್ಥರು ಮತ್ತು ಊರಿನವರು ಬಿಕ್ಕಿ ಬಿಕ್ಕಿ ಅಳುತ್ತಿರುವಾಗ, ಆಸ್ಪತ್ರೆಯವರು ಶವವನ್ನು ತಕ್ಷಣ ಕೊಂಡೊಯ್ಯಿರೆಂದು ಒತ್ತಾಯಿಸಲಾರಂಭಿಸಿದ್ದರು ಎನ್ನಲಾಗಿದೆ.
“ರಾತ್ರಿ 10 ರ ಸಂದರ್ಭದಲ್ಲಿ ನಾವು ಯಾರನ್ನು ದುಡ್ಡಿಗಾಗಿ ಕೇಳುವುದು ಎಂತಲೇ ಅರ್ಥವಾಗಲಿಲ್ಲ. ಆಸ್ಪತ್ರೆಯ ಸಿಬ್ಬಂದಿಯಂತೂ ಮತ್ತೆ ಮತ್ತೆ ಶವವನ್ನು ಕೊಂಡೊಯ್ಯಿರಿ ಎಂದು ಒತ್ತಾಯಿಸುತ್ತಲೇ ಇದ್ದರು.” ನಾವು ಈಗಾಗಲೇ ಕಂಡ ಕಂಡವರಿಂದ ಹಣವನ್ನು ಸ್ವೀಕರಿಸಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೆವು. ನಮ್ಮ ಬಳಿ ಇನ್ನೇನೂ ಉಳಿದಿರಲಿಲ್ಲ. ಆಂಬುಲೆನ್ಸ್ ನವರು ಶವವನ್ನು ಶಿರಸಿಗೆ ಸ್ಥಳಾಂತರಿಸಲು 12,000 ಗಟ್ಟಲೆ ಹಣವನ್ನು ಕೇಳುತ್ತಿದ್ದರು.”ಎನ್ನುತ್ತಾರೆ ಮೃತ ಗಣೇಶನ ಅತ್ತೆ ಹೇಮಾ ಗೌಡ.
ಈ ಮಧ್ಯೆ ಯಾರೋ ವಿಷಯವನ್ನು ಶಿರಸಿಯ ಶಾಸಕರಾದ ಭೀಮಣ್ಣ ನಾಯ್ಕ್ ಅವರಿಗೆ ತಿಳಿಸಿದ್ದಿರಬಹುದು. ಅವರ ಕಾರ್ಯದರ್ಶಿಯಿಂದ ಫೋನ್ ಕರೆ ಬಂತು. ಈ ದುರಂತ ನಡೆದಿದ್ದು ಹೌದೋ ಎಂದು ಅವರು ಮೊದಲು ಧೃಡೀಕರಿಸಿಕೊಂಡು, ತಕ್ಷಣ ಆಂಬುಲೆನ್ಸ್ ವ್ಯವಸ್ಥೆ ಮಾಡುತ್ತೇನೆ ಭಯಪಡಬೇಡಿ ಎಂದರು.”
“ಮುಂದಿನ ಅರ್ಧ ಗಂಟೆಯಲ್ಲಿ ಆಂಬುಲೆನ್ಸ್ ಬಂತು. ಊರಿನ ಎಲ್ಲಾ 9 ಮಂದಿ ಆಂಬುಲೆನ್ಸ್ ನಲ್ಲಿ ಶವವನ್ನು ತೆಗೆದುಕೊಂಡು ಶಿರಸಿಗೆ ಬಂದೆವು.”ಇನ್ನೂ ಅರ್ಧ ಗಂಟೆ ತಡವಾಗಿದ್ದರೆ ಆಸ್ಪತ್ರೆಯವರು ಶವವನ್ನು ಹೊರಗಿನ ಫುಟ್ಪಾತ್ ಮೇಲೆ ಇಟ್ಟು ಹೋಗುತ್ತಿದ್ದರೇನೊ, ಎನ್ನುತ್ತಾರೆ ಹೇಮಾ. ಜೊತೆಗೆ ಅಂಬುಲೆನ್ಸ್ ನ ಎಲ್ಲಾ ಖರ್ಚನ್ನು ಶಾಸಕರೇ ನೀಡಿ, ಮಾನವೀಯತೆ ಮೆರೆದಿದ್ದಾರೆ.