ಕಾರವಾರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪಥನಗೊಂಡು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ. ಜಿಲ್ಲೆಯಿಂದ ಮಂತ್ರಿಗಳಾಗಿ ಭಟ್ಕಳದ ಶಾಸಕ ಮಂಕಾಳ ವೈದ್ಯ ನೇಮಕವಾಗಿದ್ದಾರೆ. ಸದ್ಯ ಹೊಸ ಸರ್ಕಾರವಾದರು ಈ ಬಾರಿ ಮರಳುಗಾರಿಕೆಗೆ ಜಿಲ್ಲೆಯಲ್ಲಿ ಅನುಮತಿ ಕೊಡಲಿದೆಯೇ ಎಂದು ಜನರು ಕಾಯುವಂತಾಗಿದೆ.
ಸಿ.ಆರ್.ಜೆಡ್ ಪ್ರದೇಶದಲ್ಲಿ ಮರಳನ್ನ ತೆಗೆದು ಮಾರಾಟ ಮಾಡುವಂತಿಲ್ಲ ಎನ್ನುವ ಆದೇಶವನ್ನ ರಾಷ್ಟ್ರೀಯ ಹಸಿರು ಪೀಠ ಆದೇಶ ಮಾಡಿದ ಹಿನ್ನಲೆಯಲ್ಲಿ ಕಳೆದ ಒಂದು ವಷÀðಕ್ಕೂ ಅಧಿಕ ಕಾಲದಿಂದ ಜಿಲ್ಲೆಯಲ್ಲಿ ಮರಳು ತೆಗೆಯುವ ಕಾರ್ಯಕ್ಕೆ ಜಿಲ್ಲಾಡಳಿತದಿಂದ ತಡೆ ಹಿಡಿಯಲಾಗಿದೆ.
ಇನ್ನು ಕರಾವಳಿ ಜಿಲ್ಲೆಯಾದ ಕಾರವಾರ, ಉಡುಪಿ ಹಾಗೂ ಮಂಗಳೂರಿನಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದ್ದು, ಮೂರು ಜಿಲ್ಲೆಯಲ್ಲಿ ಮರಳಿನ ಅಭಾವ ಎದುರಾದ ಹಿನ್ನಲೆಯಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಮರಳುಗಾರಿಕೆಗೆ ಮತ್ತೆ ಅನುಮತಿ ಕೊಡುವ ಕುರಿತು ಚರ್ಚೆ ಮಾಡುವುದರಲ್ಲಿಯೇ ನಿರತವಾಗಿದ್ದು ಬಿಟ್ಟರೇ ಅನುಮತಿ ಮಾತ್ರ ಕೊಡುವಲ್ಲಿ ಯಶಸ್ವಿಯಾಗಿರಲಿಲ್ಲ. ಮರಳಿನ ಅಭಾವ ಹೆಚ್ಚಾಗಿರುವ ಹಿನ್ನಲೆಯಲ್ಲಿ, ಮಾರುಕಟ್ಟೆಯಲ್ಲೂ ಮರಳಿಗೆ ಬೇಡಿಕೆ ಇದ್ದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲ ಇಲಾಖೆ ಅಧಿಕಾರಿಗಳು ಈ ದಂದೆಯನ್ನೇ ಬಳಸಿಕೊಂಡು ಹಣ ಮಾಡುವಲ್ಲಿ ನಿರತರಾಗಿದ್ದಾರೆ.
ಅಧಿಕೃತವಾಗಿ ಮರಳು ತೆಗೆಯಲು ಅನುಮತಿ ಸಿಗದ ಹಿನ್ನಲೆಯಲ್ಲಿ ಮರಳನ್ನ ತೆಗದು ಮಾರಾಟ ಮಾಡಿ ಬದುಕುತ್ತಿದ್ದ ನೂರಾರು ಕುಟುಂಬದವರು ಕಷ್ಟದಲ್ಲಿಯೇ ಜೀವನ ನಡೆಸುವ ಪರಿಸ್ಥಿತಿ ಒಂದೆಡೆ ಆದರೆ ಇನ್ನೊಂದೆಡೆ ಮನೆ ನಿರ್ಮಾಣ ಮಾಡುವ ಜನರು ಅಧಿಕ ಮೊತ್ತವನ್ನ ಮರಳಿಗಾಗಿ ನೀಡಿ ಕದ್ದು ಮುಚ್ಚಿ ಮರಳನ್ನ ಮನೆಗೆ ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮರಳನ್ನ ಅಧಿಕೃತವಾಗಿ ತೆಗೆಯುವ ವೇಳೆಯಲ್ಲಿ ಒಂದು ಲೋಡ್ ಗೆ ಹತ್ತರಿಂದ ಹನ್ನಂದು ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಸದ್ಯ ಹದಿನೆಂಟು ಸಾವಿರ ರೂಪಾಯಿಗೂ ಅಧಿಕ ಮೊತ್ತವನ್ನ ತೆಗೆದುಕೊಳ್ಳುತ್ತಿದ್ದು, ಅದು ಪರದಾಟ ಮಾಡಿಕೊಂಡು ಮರಳನ್ನ ತೆಗೆದುಕೊಳ್ಳುವ ಪರಿಸ್ಥಿತಿ ಜನರಿಗೆ ಉದ್ಭವಿಸಿದೆ.
ಸದ್ಯ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಹೊಸ ಸರ್ಕಾರವಾದರು ಮರಳು ತೆಗೆಯಲು ಅನುಮತಿ ನೀಡಲಿದೆಯೇ ಅನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಸಿ.ಆರ್.ಜೆಡ್ ಗೆ ಮರಳು ತೆಗೆಯದಿದ್ದರೇ ಆಗುವ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ಸರ್ಕಾರ ತಿಳಿಸುವ ಮೂಲಕ ಕರಾವಳಿ ಭಾಗದ ಜನರಿಗೆ ಉಪಯೋಗ ಮಾಡಿಕೊಡುವಂತಹ ಆದೇಶ ತರಲಿದೆಯೇ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ಮಂಕಾಳ ವೈದ್ಯರ ಮೇಲೆ ನಿರೀಕ್ಷೆ
ಜಿಲ್ಲೆಯಿಂದ ಈ ಬಾರಿ ಮಂತ್ರಿಯಾಗಿರುವ ಮಂಕಾಳ ವೈದ್ಯರ ಮೇಲೆ ಮರಳನ್ನ ತೆಗೆಯಲು ಮತ್ತೆ ಸರ್ಕಾರ ಮೇಲೆ ಒತ್ತಡ ಹಾಕಿ ಅನುಮತಿ ಕೊಡಿಸಲಿದ್ದಾರೆ ಎಂದು ಮರಳು ತೆಗೆಯುವ ಲೀಸ್ ಪಡೆದವರು ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ.
ಹೊನ್ನಾವರ ಭಾಗದ ಹಲವು ಲೀಸ್ ಪಡೆದವರು ಮಂಕಾಳ ವೈದ್ಯರ ಬೆಂಬಲಿಗರೇ ಆಗಿದ್ದು ಸದ್ಯ ಜಿಲ್ಲೆಯಲ್ಲಿನ ಮರಳಿನ ಅಭಾವದ ಪರಿಸ್ಥಿತಿಯ ಬಗ್ಗೆ ಮಂಕಾಳ ವೈದ್ಯರ ಗಮನಕ್ಕೆ ಈ ಹಿಂದೆಯೇ ತಂದಿದ್ದಾರೆ ಎನ್ನಲಾಗಿದೆ.
ಸದ್ಯ ಸರ್ಕಾರದ ಮಟ್ಟಿಗೆ ಗಮನವನ್ನ ತಂದು ಹೊಸ ಸರ್ಕಾರದಲ್ಲಿ ಮರಳು ತೆಗೆಯಲು ಅವಕಾಶ ಮಾಡಿಕೊಟ್ಟರೇ ಜಿಲ್ಲೆಯಲ್ಲಿ ಮರಳಿನ ಅಭಾವದ ಸಮಸ್ಯೆ ಬಗೆಹರಿಯುವುದರ ಜೊತೆಗೆ ಜನರಿಗೂ ಕಡಿಮೆ ದರದಲ್ಲಿ ಮರಳು ಸಿಗಲಿದ್ದು, ಸಚಿವ ಮಂಕಾಳ ವೈದ್ಯ ಸಹ ಈ ಬಗ್ಗೆ ಗಮನ ಹರಿಸಬೇಕಾಗಿದೆ.