ನವದೆಹಲಿ: ಎನ್‌ಐಎ ಇಂದು ಫಿಲಿಪೈನ್ಸ್‌ನ ಮನಿಲಾದಿಂದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೆನಡಾ ಮೂಲದ ಭಯೋತ್ಪಾದಕ ‘ಅರ್ಶ್ ಧಲ್ಲಾʼನ ಇಬ್ಬರು ಸಹಚರರನ್ನು ಬಂಧಿಸಿದೆ. ಇವರಿಬ್ಬರನ್ನು ಅಮೃತಪಾಲ್ ಸಿಂಗ್ ಅಲಿಯಾಸ್ ಅಮ್ಮಿ ಮತ್ತು ಅಮ್ರಿಕ್ ಸಿಂಗ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಪಂಜಾಬ್ ಮೂಲದವರಾಗಿದ್ದಾರೆ.
ಎನ್‌ಐಎ ಮುಂಜಾನೆ ಕಾರ್ಯಾಚರಣೆಯನ್ನು ನಡೆಸಿ ಈ ಇಬ್ಬರನ್ನು ಬಂಧಿಸಿದೆ. ಎನ್‌ಐಎ ತಂಡವೊಂದು ವಿಮಾನ ನಿಲ್ದಾಣದಲ್ಲಿ ಇವರು ಇಳಿಯುವುದನ್ನೇ ಕಾಯುತ್ತಿತ್ತು. ಇಳಿದ ತಕ್ಷಣ ಬಂಧನಕ್ಕೆ ಒಳಪಡಿಸಿದೆ.
ಭಾರತದಲ್ಲಿ ನಿಷೇಧಿತ ಸಂಘಟನೆಗಳ ಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎನ್‌ಐಎ ದೆಹಲಿ ನ್ಯಾಯಾಲಯದಲ್ಲಿ ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು ಹೊರಡಿಸಿದೆ. ಬಂಧಿತರ ವಿರುದ್ಧ ಪಂಜಾಬ್‌ನಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಎನ್‌ಐಎ ಕಳೆದ ವರ್ಷ ಆಗಸ್ಟ್ 20 ರಂದು ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು.
ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಖಲಿಸ್ತಾನ್ ಟೈಗರ್ ಫೋರ್ಸ್‌ಗೆ ಹಣ ಸಂಗ್ರಹಿಸಲು ಕ್ರಿಮಿನಲ್ ಸಂಚು ರೂಪಿಸಿದ್ದರು ಮತ್ತು ಅದಕ್ಕೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಗಡಿಯಾಚೆಯಿಂದ ಕಳ್ಳಸಾಗಣೆ ಮಾಡಿದ್ದಾರೆ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ಭಾರತದಲ್ಲಿ ಕೆಟಿಎಫ್‌ನ ಹಿಂಸಾತ್ಮಕ ಕ್ರಿಮಿನಲ್ ಚಟುವಟಿಕೆಗಳನ್ನು ಉತ್ತೇಜಿಸಲು ಭಯೋತ್ಪಾದಕ ಅರ್ಷದೀಪ್ ಸಿಂಗ್ ಧಲ್ಲಾಗಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.