ಕುಮಟಾ: ತಾಲೂಕಿನ ಅಳ್ವೆಕೋಡಿ ಭಾಗದ ಅನೇಕ ಜೆಡಿಎಸ್ ಕಾರ್ಯಕರ್ತರು ಕ್ರಿಶ್ಚಿಯನ್ ಸಮುದಾಯದ ಸಿಎಡಿಕೆ ಜಿಲ್ಲಾ ಉಪಾಧ್ಯಕ್ಷ ಫ್ರಾನ್ಸಿಸ್ ಅಲ್ವಾರಿಸ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಪಟ್ಟಣದ ಮೂರೂರು ಕ್ರಾಸ್‌ನಲ್ಲಿರುವ ಕಾಂಗ್ರೆಸ್ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಳ್ವೆಕೋಡಿ ಭಾಗದ ಸುಮಾರು 30ಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾರು ಪಕ್ಷದ ಶಾಲು ಹೊದೆಸಿ ಆತ್ಮೀಯವಾಗಿ ಕಾಂಗ್ರೆಸ್‌ಗೆ ಬರಮಾಡಿಕೊಂಡರು. ಈ ಸೇರ್ಪಡೆಯ ನೇತೃತ್ವವನ್ನು ಕ್ರಿಶ್ಚಿಯನ್ ಸಮುದಾಯದ ಸಿಎಡಿಕೆ ಉಪಾಧ್ಯಕ್ಷ ಫ್ರಾನ್ಸಿಸ್ ಅಲ್ವಾರಿಸ್ ವಹಿಸಿದ್ದರು. ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾರು, ಜೆಡಿಎಸ್ ಪಕ್ಷದಿಂದ ಅನೇಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಬರುತ್ತದೆ. ಹಾಗಾಗಿ ನಾವೆಲ್ಲ ಸೇರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮ ಸರ್ಕಾರದ ಬಂದ ಮೇಲೆ ನಾನೇನು ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಆಶ್ವಾಸನೆಗಳನ್ನು ನೀಡಿದ್ದೇನೆ, ಅದನೆಲ್ಲ ಪ್ರಾಮಾಣಿಕವಾಗಿ ನೆರವೇರಿಸುವ ಕಾರ್ಯ ಮಾಡುತ್ತೇನೆ. ಕ್ಷೇತ್ರದ ಜನತೆ ನನಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ ಮಾತನಾಡಿ, ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ನೋಡಿ ಅನೇಕರು ನಮ್ಮ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ನಮ್ಮ ಪಕ್ಷದ ತತ್ವ, ಸಿದ್ಧಾಂತವನ್ನು ನೆಚ್ಚಿಕೊಂಡು ಪಕ್ಷಕ್ಕೆ ಬಂದ ಮೇಲೆ ನಮ್ಮ ಕಾರ್ಯಕರ್ತರಿಗೆ ಏನೆಲ್ಲ ಗೌರವ ಲಭ್ಯವಾಗುತ್ತದೆಯೋ ಆ ಎಲ್ಲ ಗೌರವ ತಮಗೆ ಲಭ್ಯವಾಗುತ್ತದೆ. ಎಲ್ಲ ಸಮಾಜದವರು ಸೇರಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಚಿತ್ರಣವನ್ನೆ ಬದಲಾಯಿಸೋಣ ಎಂದು ಕರೆ ನೀಡಿದರು.
ಕ್ರಿಶ್ಚಿಯನ್ ಸಮುದಾಯದ ಸಿಎಡಿಕೆ ಜಿಲ್ಲಾ ಉಪಾಧ್ಯಕ್ಷ ಫ್ರಾನ್ಸಿಸ್ ಅಲ್ವಾರಿಸ್ ಮಾತನಾಡಿ, ನಾನು ಮೊದಲು ಕಾಂಗ್ರೆಸ್‌ನಲ್ಲಿದ್ದೆ. ಎಲ್ಲ ಅನಿವಾರ್ಯ ಕಾರಣಗಳಿಂದ ಪಕ್ಷ ತೊರಿದಿದ್ದೆ. ಈಗ ಪುನಃ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಮರಳಿ ಗೂಡಿಗೆ ಬಂದ ಸಂತೋಷ ಇದೆ. ನಮ್ಮ ಭಾಗದ ಅಭಿವ್ರದ್ಧಿಯ ಬಗ್ಗೆ ನಾನು ಕಾಂಗ್ರೆಸ್ ಅಭ್ಯರ್ಥಿಯ ಬಳಿ ಇಟ್ಟಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ ನಮ್ಮೆಲ್ಲ ಸಮಸ್ಯೆಗೂ ಸ್ಪಂದಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ಅವರನ್ನು ಈ ಬಾರಿ ಕ್ಷೇತ್ರದಲ್ಲಿ ಗೆಲ್ಲಿಸಲು ನಾವೆಲ್ಲ ಶ್ರಮಿಸುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡ ಆರ್ ಎಚ್ ನಾಯ್ಕ ಎಲ್ಲರನ್ನೂ ಸ್ವಾಗತಿಸಿ, ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಂ.ಟಿ.ನಾಯ್ಕ, ಕಾಂಗ್ರೆಸ್ ಪ್ರಮುಖರಾದ ಫ್ರಾನ್ಸಿಸ್ ಫರ್ನಾಂಡೀಸ್, ರಾಮ ಪಟಗಾರ, ಅಶೋಕ ಗೌಡ, ಗಜು ನಾಯ್ಕ ಅಳ್ವೆಕೋಡಿ, ರಾಘವೇಂದ್ರ ಜಾದವ್, ಸೀತಾರಾಮ ನಾಯ್ಕ, ಸುಬ್ರಾಯ ನಾಯ್ಕ , ಇತರರು ಉಪಸ್ಥಿತರಿದ್ದರು.