Slide
Slide
Slide
previous arrow
next arrow

ಕೀಳರಿಮೆ ಬಿಟ್ಟು ಪ್ರಯತ್ನಶೀಲರಾಗಿ: ಮಂಗಳನಾಥ ಸ್ವಾಮೀಜಿ

300x250 AD

ಸಿದ್ದಾಪುರ: ಅಜ್ಞಾನಿ ಎಂಬ ಕೀಳರಿಮೆ ಬಿಟ್ಟು ಯಾವುದೇ ಕಾರ್ಯದಲ್ಲಿ ಪ್ರಯತ್ನಶೀಲರಾಗಿ ಮುನ್ನುಗ್ಗಿದಾಗ ಸಮಾಜದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ದೊಡ್ಮನೆ ವ್ಯಾಪ್ತಿಯ ಚಿಂಗೋಳಿಮಕ್ಕಿ ಮೈದಾನದಲ್ಲಿ ಶ್ರೀಗ್ರಾಮದೇವಾ ಕರೆ ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಕರೆ ಒಕ್ಕಲಿಗರ ಸಮಾವೇಶ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶಿರ್ವಚನ ನೀಡಿದ ಅವರು, ಸತ್ಯನಾರಾಯಣ ಪೂಜೆಯೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕೆಲಸ. ಸಮಾಜದಲ್ಲಿ ಎಲ್ಲರೂ ಪ್ರಯತ್ನಶೀಲರಾಗಬೇಕು. ನಮ್ಮಲ್ಲಿರುವ ಕೀಳರಿಮೆ ಬಿಟ್ಟು ಮುನ್ನುಗ್ಗಬೇಕು ಎಂದು ಹೇಳಿದರು.
ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಯಾರು ಬಿಡಬಾರದು. ಮಕ್ಕಳನ್ನು ಸಂಸ್ಕಾರಯುತ ವಿದ್ಯಾವಂತರನ್ನಾಗಿ ಮಾಡಬೇಕು. ಟಿವಿ, ಮೊಬೈಲ್‌ಗಳನ್ನು ಅವಶ್ಯಕತೆಗೆ ತಕ್ಕಂತೆ ಬಳಸಿ ಮಾಡುವ ಕೆಲಸದ ಕಡೆ ಹೆಚ್ಚು ಗಮನಹರಿಸಬೇಕು. ಯಾವುದೇ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗದೇ ಇದ್ದಲ್ಲಿ ಅಂತವರನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ತಂದುಬಿಟ್ಟಲ್ಲಿ ಅಂತವರಿಗೆ ಉಚಿತ ಊಟ ವಸತಿಯನ್ನು ಕಲ್ಪಿಸಿ ಎಲ್ಲಿವರೆಗೆ ಓದಲು ಬಯಸುವರೋ ಅಲ್ಲಿವರೆಗೂ ಓದಿಸಿ ಪುನಃ ನಿಮ್ಮ ಮನೆಗೆ ಕಳುಹಿಸಲಾಗುತ್ತದೆ. ಇದರ ಸದುಪಯೋಗ ಪಡೆದು ಎಲ್ಲರು ಸುಶಿಕ್ಷಿತರಾಗಬೇಕು ಎಂದು ಹೇಳಿದರು.

ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಆಶಿರ್ವಚನ ನೀಡಿ ಒಕ್ಕಲಿಗರ ಸಮುದಾಯ ದೊಡ್ಡ ಸಮುದಾಯ ಹರಿದು ಹಂಚಿಹೋಗಿರುವ ಸಮುದಾಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಒಗ್ಗೂಡಿ ಆಯಾ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದೆ. ಸಮಾಜದ ಪ್ರತಿಯೊಬ್ಬರು ಇದನ್ನು ಅರಿತು ಮುನ್ನಡೆಯಬೇಕು ಎಂದು ಹೇಳಿದರು.

300x250 AD

ಉಪನ್ಯಾಸಕರಾದ ಡಾ.ಉಮೇಶ ಭದ್ರಾಪುರ ಉಪನ್ಯಾಸ ನೀಡಿ, ಉತ್ತರಕನ್ನಡ ಒಕ್ಕಲಿಗರ ಸಂಘಕ್ಕೆ 75 ವರ್ಷಗಳ ಇತಿಹಾಸ ಇದೆ. ಈ ಹಿಂದೆ ಎಲ್ಲ ಉಪಜಾತಿಗಳು ಸೇರಿ ಒಂದೇ ಸಂಘಟನೆ ಇತ್ತು. ಆದರೆ ಇಂದು ಎಲ್ಲವರೂ ಪ್ರತ್ಯೇಕ ಸಂಘಟನೆಗಳಾಗಿದ್ದರೂ ಎಲ್ಲರೂ ಕೂಡ ತಮ್ಮ ಸಮುದಾಯದ ಒಳಿತಿಗಾಗಿ ಪ್ರಯತ್ನಿಶೀಲರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ನಮ್ಮ ಮಕ್ಕಳಿಗೆ ಸರಿಯಾಗಿ ಶಿಕ್ಷಣದ ಮಹತ್ವ ತಿಳಿಸದೆ ಅರ್ಧ ಎಕರೆ ತೋಟಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ನಾವು ಹಾಳು ಮಾಡುತ್ತಿದ್ದೇವೆ. ಇಂತಹ ಕೆಲಸ ಆಗಬಾರದು. ಸಮಾಜ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಮಾತ್ರ ಅವರು ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಏರಲು ಸಾಧ್ಯವಿದೆ ಎಂದರು.
ಸಾಧನೆ ಮಾಡುವವರಿಗೆ ಮೊದಲು ಎದರಾಗುವುದು ಅವಮಾನ. ಆದರೆ ನಂತರದ ದಿನಗಳಲ್ಲಿ ಸನ್ಮಾನ ನಡೆಯಲಿದೆ. ಆದರೆ ನಮ್ಮವರು ಮೊದಲ ಹಂತದಲ್ಲಿಯೇ ಸೋತೆವೆಂದು ತಿಳಿದು ಸಂಘಟನೆಯಿಂದ ಹಿಂದಡಿಯಿಡುತ್ತಾರೆ. ಹಾಗೆ ಆಗದಂತೆ ಸಮಾಜದ ಪ್ರತಿಯೊಬ್ಬರು ಸಂಘಟನೆ ಮಾಡುವವರಿಗೆ ಬೆನ್ನೆಲುಬಾಗಿ ನಿಂದು ಸಂಘಟನೆಗೆ ಶಕ್ತಿತುಂಬಬೇಕು ಎಂದು ಹೇಳಿದರು. ಶಿರಸಿ ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಅರುಣ ಗೌಡ ಮಳಲಿ, ಸೊರಬಾ ಕರೆ ಒಕ್ಕಲಿಗರ ಸಂಘ ಉಮಾಕಾಂತ ಗೌಡ, ಕುಮಟಾ ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಸಣ್ಯಾ ಗೌಡ ಇನ್ನಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಳೆಯ ಹಾಗೂ ಇಂದಿನ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಆರಂಭಕ್ಕೂ ಮುನ್ನ ಸ್ವಾಮೀಜಿಗಳನ್ನು ಕಟ್ಟೆಕೈ ಹಾಗೂ ಹಸಗೋಡು ಡೊಳ್ಳು ತಂಡಗಳ ಡೊಳ್ಳು ಕುಣಿತದ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸೀತಾರಾಮ ಗೌಡ, ಬೀರಾ ಗೌಡ, ಚಿನ್ನು ಗೌಡ, ರಾಮಾ ಗೌಡ, ಅಮ್ಮು ಗೌಡ, ರಾಧಾ ಗೌಡ, ಮೋಹನ್ ಗೌಡ, ಸಂಘದ ಅಧ್ಯಕ್ಷ ಗೋವಿಂದ ಗೌಡ, ತಿರುಮಲಗೌಡ,  ರಾಜು ಗೌಡ ಸೇರಿದಂತೆ ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top