ಕಾರವಾರ: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಗುರಿ ಮುಟ್ಟಲು ಸಂಕಲ್ಪ ಮಾಡುವ ‘ವಿಜಯ ಸಂಕಲ್ಪ ಯಾತ್ರೆ’ ಮಾ.18ರಿಂದ 20ರವರೆಗೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 150ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಗುರಿಯ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಸಂಘಟನಾತ್ಮಕವಾಗಿ ಹಾಗೂ ಆಡಳಿತಾತ್ಮಕವಾಗಿ ಚಟುವಟಿಕೆಗಳನ್ನ ಮಾಡಲಾಗುತ್ತಿದೆ. ಮಾ.10ರಂದು ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಕಾರವಾರದಲ್ಲಿ, ಮಾ.14ರಂದು ಯಲ್ಲಾಪುರದಲ್ಲಿ ಎಸ್‌ಟಿ ಸಮಾವೇಶ ನಡೆಯಲಿದೆ. ಇದರೊಂದಿಗೆ ವಿಜಯ ಸಂಕಲ್ಪ ಯಾತ್ರೆಯ ಅಡಿಯಲ್ಲಿ ಪಕ್ಷದ ಹಿರಿಯರು ರಾಜ್ಯದ ಮೂಲೆ ಮೂಲೆಯಲ್ಲಿ ಯಾತ್ರೆ ಮಾಡುತ್ತಿದ್ದು, ಜಿಲ್ಲೆಯಲ್ಲೂ ಯಾತ್ರೆಯ ವೇಳಾಪಟ್ಟಿ ನಿಗದಿಯಾಗಿದೆ ಎಂದರು.
ಮಾ.18ರಂದು ಸಂಜೆ 6 ಗಂಟೆಗೆ ಹಳಿಯಾಳದಲ್ಲಿ ರೋಡ್ ಶೋ ಮೂಲಕ ಆರಂಭವಾಗಲಿರುವ ಈ ಯಾತ್ರೆಯಲ್ಲಿ 19ರಂದು ಬೆಳಿಗ್ಗೆ 11 ಗಂಟೆಗೆ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಟಿ, ರೋಡ್ ಶೋ, ಮಧ್ಯಾಹ್ನ 3 ಗಂಟೆಗೆ ಅಂಕೋಲಾದಲ್ಲಿ ರೋಡ್ ಶೋ, ಸಂಜೆ 6 ಗಂಟೆಗೆ ಕುಮಟಾದಲ್ಲಿ ಸಾರ್ವಜನಿಕ ಸಭೆ, 20ರಂದು ಬೆಳಿಗ್ಗೆ ಮುರುಡೇಶ್ವರದಲ್ಲಿ ರೋಡ್ ಶೋ, ಸಂಜೆ 3 ಗಂಟೆಗೆ ಶಿರಸಿಯಲ್ಲಿ ರೋಡ್ ಶೋ ನಡೆಯಲಿದೆ ಎಂದರು.
ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ, ಕಾರವಾರ ನಗರ ಬಿಜೆಪಿ ಅಧ್ಯಕ್ಷ ನಾಗೇಶ ಕುರ್ಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಮುಂತಾದವರಿದ್ದರು.