ಹಳಿಯಾಳ: ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿಗಳೂ, ಅಂಕಣಕಾರರೂ ಆದ ಸಂತೋಷಕುಮಾರ ಮೆಹಂದಳೆ ಆಯ್ಕೆಯಾಗಿದ್ದಾರೆ ಎಂದು ತಾಲೂಕಾ ಕಸಾಪ ಅಧ್ಯಕ್ಷ ಸುಮಂಗಲಾ ಅಂಗಡಿ ತಿಳಿಸಿದ್ದಾರೆ.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರ ಉಪಸ್ಥಿತಿಯಲ್ಲಿ ನಡೆದ ತಾಲೂಕಾ ಕಾರ್ಯಕಾರಿ ಸಭೆಯಲ್ಲಿ ಈ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಗಿದೆ. ಸಮ್ಮೇಳನವು ಮಾ.2ರಂದು ಹಳಿಯಾಳದ ಮರಾಠಾ ಸಮಾಜ ಭವನದಲ್ಲಿ ನಡೆಯಲಿದೆ. ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಮೊದಲು ದಾಂಡೇಲಿ- ಹಳಿಯಾಳ ಒಂದೇ ತಾಲೂಕಾದ ಸಂದರ್ಭದಲ್ಲಿ ದಾಂಡೇಲಿಯವರೇ ಹೆಚ್ಚಿನ ಸಂಖ್ಯೆಯಲ್ಲಿ ಪರಿಷತ್ತಿನ ಜೊತೆ ಗುರುತಿಸಿಕೊಂಡಿದ್ದರು. ಈಗ ತಾಲೂಕಿನ ವಿಭಜನೆಯಾದ ಮೇಲೆ ಸಾಹಿತ್ಯ ಸಂಘಟನೆ ಇಲ್ಲಿ ಆಗಬೇಕಿದ್ದು, ಕನ್ನಡದ ಅಕ್ಷರ ಜಾತ್ರೆಗೆ ಎಲ್ಲರೂ ಸಹಕರಿಸಬೇಕೆಂದರು.
ತಾಲೂಕಾಧ್ಯಕ್ಷೆ ಸುಮಂಗಲಾ ಅಂಗಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡುತ್ತಾ, ದಾಂಡೇಲಿ ಹೊಸ ತಾಲೂಕಾದರೂ ಹಳಿಯಾಳ ಸಾಹಿತ್ಯ ಕ್ಷೇತ್ರದಲ್ಲಿ ಹೊಸದು ಎಂಬಂತೆ ಭಾಸವಾಗುತ್ತದೆ. ಇಲ್ಲಿ ಪರಿಷತ್ತನ್ನು ತಳದಿಂದಲೇ ಕಟ್ಟಬೇಕಿದೆ. ಇದು ತಾಲೂಕಿನ 9ನೇ ಸಮ್ಮೇಳನವಾಗಿದ್ದರೂ ನಮಗೆ ಪ್ರಥಮ ಸಮ್ಮೇಳನವೆಂಬಂತಾಗಿದೆ. ತಾಲೂಕಿನ ಎಲ್ಲ ಸಂಘಟನೆಗಳು, ಅಧಿಕಾರಿ ವರ್ಗದವರು, ಎಲ್ಲ ಸಮಾಜದ ಮುಖಂಡರು ಕನ್ನಡಾಭಿಮಾನಿಗಳು ಸಹಕಾರ ನೀಡಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ತಹಶೀಲ್ದಾರರು ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡ, ಸಮ್ಮೇಳನ ಯಶಸ್ಸಿಗೆ ತಾಲೂಕಾ ಆಡಳಿತದಿಂದ ಸಹಕಾರ ನೀಡುವ ಭರವಸೆ ನೀಡಿದರು. ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಶಾಂತಾರಾಮ ಚಿಬ್ಬೂಲಕರ್, ಬಸವರಾಜ ಇಟಗಿ, ಜಿಲ್ಲಾ ಕಸಾಪ ಪದಾಧಿಕಾರಿ ಸಿದ್ದು ಬಿರಾದಾರ ಸೇರಿದಂತೆ ಪದಾಧಿಕಾರಿಗಳಾದ ಕಾಳಿದಾಸ ಬಡಿಗೇರ, ಝಾಕೀರ ಜಂಗೂಬಾಯಿ, ಕಲ್ಪನಾ ಹುದ್ದಾರ, ಶ್ರೀಶೈಲ ಹುಲ್ಲೇನ್ನವರ, ಗೋಪಾಲ ಮೇತ್ರಿ, ಜಿ.ಡಿ.ಗಂಗಾಧರ, ವಿಠ್ಠಲ ಕೋರ್ವೇಕರ್ ಮುಂತಾದವರು ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.