ಅಂಕೋಲಾ: ಇತ್ತೀಚೆಗೆ ಡಾ.ದಿನಕರ ದೇಸಾಯಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೆಎಂಸಿ ಮಣಿಪಾಲದ ದಂತವೈದ್ಯರ ತಂಡದಿಂದ ಉಚಿತವಾಗಿ ದಂತ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ಜರುಗಿತು.
ಈ ಶಿಬಿರದಲ್ಲಿ ಹಲ್ಲುಗಳ ಸ್ವಚ್ಛಗೊಳಿಸುವಿಕೆ, ಹುಳುಕು ಹಲ್ಲುಗಳಿಗೆ ಸಿಮೆಂಟ್ ತುಂಬಿಸುವಿಕೆ ಹಾಗೂ ಹಾಳಾದ ಹಲ್ಲುಗಳನ್ನು ಕೀಳುವ ಪ್ರಕ್ರಿಯೆ ಜರುಗಿತು. ಈ ಶಿಬಿರವನ್ನ ಸುಮಾರು 260ಕ್ಕೂ ಹೆಚ್ಚು ಜನ ಪ್ರಯೋಜನ ಪಡೆದರು. ಈ ಉಚಿತ ದಂತ ಚಿಕಿತ್ಸಾ ಶಿಬಿರವು ಕನ್ನಡ ವೈಶ್ಯ ವೆಲ್ಫೇರ್ ಟ್ರಸ್ಟ್, ಲಯನ್ಸ್ ಕ್ಲಬ್ ಕರಾವಳಿ, ಸಂಗಮ ಸಂಸ್ಥೆ ಬಾಳೇಗುಳಿ ಸಂಯುಕ್ತ ಆಶ್ರಯದಲ್ಲಿ ಜರುಗಿತು.
ಈ ಶಿಬಿರವನ್ನು ಕೆಎಂಸಿ ದಂತ ಮಹಾವಿದ್ಯಾಲಯದ ತಜ್ಞ ವೈದ್ಯ ಡಾ.ಆನಂದ ಉದ್ಘಾಟಿಸಿ ದಂತ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ವೆಲ್ಫೆರ್ ಟ್ರಸ್ಟ್ ಅಂಕೋಲಾದ ಅಧ್ಯಕ್ಷ ಕೃಷ್ಣಾನಂದ ವಿ. ಶೆಟ್ಟಿಯವರು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಶಿಬಿರವನ್ನು ಅಂಕೋಲಾದಲ್ಲಿ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪಿ.ಎಂ.ಪ್ರೌಢಶಾಲೆ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಜರುಗಿತು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವಿಂದ್ರ ಎನ್. ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿದರು. ಜಿ.ಆರ್.ತಾಂಡೇಲ್ ಕಾರ್ಯಕ್ರಮ ನಿರ್ವಹಿಸಿ ದಿನಕರ ದೇಸಾಯಿ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಸುಭಾಷ್ ನಾಯ್ಕ ವಂದಿಸಿದರು. ಕಾರ್ಯಕ್ರಮ ಸಂಘಟನೆಯಲ್ಲಿ ಲಾಯನ್ಸ್ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ, ಸದಸ್ಯರಾದ ಮಹಾಂತೇಶ ರೇವಡಿ, ಕೆಎಲ್ಇ ಸಂಸ್ಥೆಯ ತಿಮ್ಮಣ್ಣ ಭಟ್ ನೆರವಾಗಿದ್ದರು.