ಹಳಿಯಾಳ: ಜಲ, ಮಣ್ಣು, ಪರಿಸರ ಸಂರಕ್ಷಣೆ ದೃಷ್ಟಿಯಿಂದ ಜಿಲ್ಲೆಯಲ್ಲಿ ನರೇಗಾ ಒಗ್ಗೂಡಿಸುವಿಕೆ ಅಡಿಯಲ್ಲಿ ಪಿಆರ್ಇಡಿ, ಸಣ್ಣ ನೀರಾವರಿ ಹಾಗೂ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಅನುಷ್ಠಾನ ಇಲಾಖೆಗಳಿಂದ ಅಭಿವೃದ್ಧಿಪಡಿಸಲು ಅಮೃತ ಸರೋವರ ಅಭಿಯಾನದಡಿ ಕೈಗೆತ್ತಿಕೊಂಡರಿರುವ ಅಮೃತ ಸರೋವರ ಕೆರೆ ಕಾಮಗಾರಿಗಳನ್ನು ಮುಂದಿನ 10-12 ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯತ್ನ ಸಭಾಂಗಣದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳ ಉಪಸ್ಥಿಯಲ್ಲಿ ಶನಿವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನರೇಗಾದಡಿ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಅಮೃತ ಸರೋವರಗಳ ಪ್ರಗತಿಯು ಶೇ 75ರಷ್ಟಾಗಿದ್ದು, ಪ್ರಗತಿಯನ್ನು ಶೇ. 100ರಷ್ಟಕ್ಕೆ ತಲುಪಿಸಬೇಕು. ಅಮೃತ ಸರೋವರ ಕೆರೆ ಕಾಮಗಾರಿಗಳನ್ನು ಮುಕ್ತಾಯಗೊಳಿಸುವ ಜವಾಬ್ದಾರಿಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ನರೇಗಾ ಸಹಾಯಕ ನಿರ್ದೇಶಕರುಗಳು ತೆಗೆದುಕೊಳ್ಳಬೇಕು. ಹಾಗೇನೆ ನರೇಗಾದಡಿ ನಿರ್ಮಿತ ಶಾಲಾ ಶೌಚಾಲಯ, ಅಂಗನವಾಡಿ ಕೇಂದ್ರ, ವಸತಿ ಮನೆ, ಶಾಲಾ ಕಾಂಪೌಂಡ್ ಕಾಮಗಾರಿ ಮುಕ್ತಾಯವಾದ ನಂತರ ಜನರಿಗೆ ಆಕರ್ಷಿತವಾಗುವಂತೆ ವಿವಿಧ ಬಗೆಯ ಬಣ್ಣ ಲೇಪಿಸಬೇಕು. ಜೊತೆಗೆ ನರೇಗಾ ಮಾಹಿತಿ ಪಸರಿಸುವಂತಹ ಗೋಡೆ ಬರಹ, ಚಿತ್ರ ಬಿಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಇದೇ ವೇಳೆ ಎಲ್ಲ ಗ್ರಾಪಂ ಪಿಡಿಒ, ಹಲವು ಅನುಷ್ಠಾನ ಇಲಾಖೆಗಳ ಅಧಿಕಾರಿಗಳೊಂದಿಗೆ ನರೇಗಾ, ಗ್ರಂಥಾಲಯ ಡಿಜಿಟಲೀಕರಣ, ವಸತಿ, ಆರೋಗ್ಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಸರಕಾರದಿಂದ ಗ್ರಾಮೀಣ ಜನರಿಗೆ ದೊರಕುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಶ್ರಮಿಸುವಂತೆ ಹೇಳಿದರು. ಮತದಾರರ ನೋಂದಣಿ, ಮತದಾನ ಪ್ರಕ್ರಿಯೆ, ಇವಿಎಂ ಮಷಿನ್ ಕಾರ್ಯ, ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರರ ಪಾತ್ರ ಕುರಿತು ಚುನಾವಣಾ ಆಯೋಗದಿಂದ ಸಿದ್ಧಪಡಿಸಲಾದ ವಿಡಿಯೋವನ್ನು ಎಲ್ಲ ಅಧಿಕಾರಿಗಳಿ ಪ್ರದರ್ಶಿಸಿ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜನರಿಗೆ ಸ್ವಿಪ್ ಚಟುವಟಿಕೆಗಳನ್ನು ನಡೆಸಿ ಜಾಗೃತಿ ಮೂಡಿಸುವಂತೆ ತಿಳಿಸಿದರು.
ನಂತರದಲ್ಲಿ ಚುನಾವಣಾ ಆಯೋಗದಿಂದ ಜರುಗಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು. ಹಳಿಯಾಳ, ದಾಂಡೇಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರು, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ತಾಪಂ ವ್ಯವಸ್ಥಾಪಕರು, ಪಿಡಿಒಗಳು, ನರೇಗಾ ತಾಂತ್ರಿಕ, ಎಮ್ಐಎಸ್, ಐಇಸಿ ಸಂಯೋಕರು, ತಾಂತ್ರಿಕ ಸಹಾಯಕ ಅಭಿಯಂತರರು, ಬಿಎಫ್ಟಿಗಳು ಹಾಗೂ ಗ್ರಾಪಂ, ತಾಪಂ ಸಿಬ್ಬಂದಿ ಇದ್ದರು.