ಕಾರವಾರ: ಪಹರೆ ವೇದಿಕೆಯ ಸ್ವಚ್ಛತಾ ಕಾರ್ಯಕ್ರಮವು 8ನೇ ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಯಲ್ಲಿ ಜ.22ರಂದು ಕಾರವಾರದಿಂದ ಗೋವಾಕ್ಕೆ ಸ್ವಚ್ಛತಾ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಪಹರೆ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.22ರ ಭಾನುವಾರದಂದು ಬೆಳಿಗ್ಗೆ 6ಕ್ಕೆ ಸುಭಾಷ್ ಸರ್ಕಲ್‌ನಿಂದ ಗೋವಾ ಗಡಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಗೋವಾದ ಗಡಿಯಲ್ಲಿ ಸಮಾವೇಶವನ್ನೂ ನಡೆಸಲಿದ್ದೇವೆ. ಸ್ವಚ್ಛತಾ ನಡಿಗೆಯಲ್ಲಿ ಒಳಗೊಳ್ಳುವ ಗ್ರಾಮಗಳಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಮಾರ್ಗ ವ್ಯಾಪ್ತಿಯ ಗ್ರಾಮಗಳಲ್ಲಿನ ಪ್ರಮುಖರನ್ನು ಭೇಟಿಯಾಗಿ ಸಹಕಾರ ಕೇಳಿದ್ದೇವೆ. ವಿದ್ಯಾರ್ಥಿಗಳು, ಇತರ ಸಂಘ- ಸಂಸ್ಥೆಗಳ ಸದಸ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಸ್ವಚ್ಛತೆಯ ಸಂದೇಶವನ್ನು ಇಡೀ ದೇಶಕ್ಕೆ ಸಾರಬೇಕಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸ್ವಚ್ಛತೆಯೊಂದೇ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಕೆ.ಡಿ.ಪೆಡ್ನೇಕರ್, ಅಜಯ್ ಸಾಹುಕಾರ, ಸದಾನಂದ ಮಾಂಜ್ರೇಕರ್ ಹಾಗೂ ಶಿವಾನಂದ ಶಾನಭಾಗ ಇದ್ದರು.
ಕೋಟ್…
ನಗರ, ಹಳ್ಳಿ ಪ್ರದೇಶಗಳು ಸ್ವಚ್ಛಗೊಳ್ಳುತ್ತಿದೆ. ಆದರೆ ರಾಷ್ಟ್ರೀಯ ಹೆದ್ದಾರಿಗಳು ಅಸ್ವಚ್ಛತೆಯಿಂದ ಕೂಡಿರುತ್ತಿದೆ. ಮುಂದಿನ ದಿನಗಳ ರಾಷ್ಟ್ರೀಯ ಹೆದ್ದಾರಿ ಸ್ವಚ್ಛಗೊಳಿಸುವ ಅಭಿಯಾನವನ್ನೂ ಹಮ್ಮಿಕೊಳ್ಳಲಿದ್ದೇವೆ.
• ನಾಗರಾಜ ನಾಯಕ, ಪಹರೆ ಸಂಸ್ಥಾಪಕ ಅಧ್ಯಕ್ಷ