Slide
Slide
Slide
previous arrow
next arrow

ಕರ ವಸೂಲಿ ಪ್ರಕ್ರಿಯೆ ಚುರುಕುಗೊಳಿಸಲು ಆಗ್ರಹ

300x250 AD

ಕುಮಟಾ: ನೀರಿನ ಕರ ವಸೂಲಿಯಲ್ಲಿ ಸಿಬ್ಬಂದಿಯು ನಿರ್ಲಕ್ಷ್ಯ ವಹಿಸಿದ್ದರಿಂದ ಪುರಸಭೆಗೆ ಬರಬೇಕಾದ ಲಕ್ಷಾಂತರ ರೂ. ಬಾಕಿ ಉಳಿದಿದ್ದು, ಕರ ವಸೂಲಿ ಪ್ರಕ್ರಿಯೆ ಚುರುಕುಗೊಳಿಸಬೇಕೆಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಆಗ್ರಹಿಸಿದರು.
ಪುರಸಭಾ ಅಣ್ಣಾ ಪೈ ಸಭಾಭವನದಲ್ಲ್ಲಿ ಅಧ್ಯಕ್ಷೆ ಅನುರಾಧಾ ಬಾಳೇರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅಮೃತ ಯೋಜನೆಯಿಂದ ಅನುದಾನ ಮಂಜೂರಿಯಾಗಿದ್ದು, ಕ್ರಿಯಾಯೋಜನೆ ತಯಾರಿಗೆ ಸದಸ್ಯರು ಒಪ್ಪಿಗೆ ಸೂಚಿಸಬೇಕು ಎಂದು ವಿನಂತಿಸಿದರು. ಪುರಸಭಾ ಸದಸ್ಯ ಸಂತೋಷ ನಾಯ್ಕ ಮಾತನಾಡಿ, ನೀರಿನ ತೆರಿಗೆ ವಸೂಲಾತಿ 30 ಲಕ್ಷ ರೂ. ಬಾಕಿ ಉಳಿದಿದೆ. ಒಟ್ಟೂ 1.97 ಕೋಟಿ ರೂ. ವಸೂಲಾತಿಯಲ್ಲಿ ಅರ್ಧಕ್ಕಿಂತ ಕಡಿಮೆ ಹಣ ವಸೂಲಿ ಮಾಡಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷö್ಯದಿಂದ ವಸೂಲಾತಿ ಕುಂಠಿತವಾಗಿದೆ ಎಂದು ಆರೋಪಿಸಿದರು.
ಪುರಸಭೆ ಮುಖ್ಯಾಧಿಕಾರಿ ಅಜಯ ಭಂಡಾರ್ಕರ್ ಮಾತನಾಡಿ, ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯ ಮರಾಕಲ್ ಪೈಪ್‌ಲೈನ್ ಬಹಳ ಹಳೆಯದಾಗಿದ್ದು, ಪ್ರತಿವಾರವೂ ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಹೊಸ ಪೈಪ್‌ಲೈನ್ ಅಳವಡಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ 70 ಕೋಟಿ ಅನುದಾನ ಮಂಜೂರಿಗೆ ವಿನಂತಿಸಲಾಗಿತ್ತು. ಕೇಂದ್ರ ಸರ್ಕಾರ ಅಮೃತ 2.0 ಯೋಜನೆಯಲ್ಲಿ 33.32 ಕೋಟಿ ರೂ. ಅನುದಾನ ನೀಡಿದೆ. ದೀವಳ್ಳಿಯಿಂದ ಸಾಂತಗಲ್ ವರೆಗೆ 3.1 ಕಿ.ಮೀ ಹೊಸದಾಗಿ ಪೈಪ್‌ಲೈನ್ ಅಳವಡಿಸಲು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಜತೆ ಚರ್ಚಿಸಿ ಸೂಚನೆ ನೀಡಿದ್ದೇನೆ. ಉಳಿದ ಕಡೆ ಹಾಳಾದಲ್ಲಿ ಹೊಸದಾಗಿ ಪೈಪ್‌ಲೈನ್ ನಿರ್ಮಿಸಲಾಗುತ್ತದೆ. ಮರಾಕಲ್ ನೀರು ಪೂರೈಕೆಯ ಘಟಕದಲ್ಲಿರುವ ಪಂಪ್ ಬಹಳ ಹಳೆಯದಾಗಿದ್ದು, ಹೆಚ್ಚುವರಿಯಾಗಿ ಒಂದು ಪಂಪ್ ಖರೀದಿಸದರೆ ಅನುಕೂಲವಾಗುತ್ತದೆ. ಸರ್ವ ಸದಸ್ಯರು ಒಪ್ಪಿಗೆ ಸೂಚಿಸದರೆ ಪಂಪ್ ಖರೀದಿಸಲಾಗುತ್ತದೆ. ಇಲ್ಲವಾದಲ್ಲಿ ಹಳೆಯ ಪಂಪ್ ದುರಸ್ಥಿ ಮಾಡಿಸಲಾಗುತ್ತದೆ. ಅಲ್ಲದೇ ಕುಡಿಯುವ ನೀರಿನ ತೆರಿಗೆ ವಸೂಲಿಗೆ ಪ್ರತಿ ವಾಲ್‌ಮೆನ್‌ಗಳಿಗೆ 50 ಸಾವಿರ ಟಾರ್ಗೆಟ್ ನೀಡಲಾಗಿದೆ. ಆದರೆ ಅವರು ನಿರೀಕ್ಷಿತ ಪ್ರಮಾಣದಲ್ಲಿ ವಸೂಲಾತಿ ಮಾಡುತ್ತಿಲ್ಲ. 12 ಲಕ್ಷ ಸರ್ಕಾರ ಇಲಾಖೆಗಳಿಂದ ಬರಬೇಕಿದ್ದು, ಆಡಳಿತ ಮಂಡಳಿ ನಮ್ಮ ಪರವಾಗಿ ನಿಂತರೆ ಕಾನೂನು ರೀತಿಯಲ್ಲಿ ವಸೂಲಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ವಾಲ್‌ಮೆನ್‌ಗಳ ಬದಲಾವಣೆಗೆ ಒಪ್ಪಿಗೆ ನೀಡಿದರೆ ಅವರನ್ನು ವಜಾಗೊಳಿಸಿ, ಬೇರೆ ವಾಲ್‌ಮೆನ್‌ಗಳ ನೇಮಕಾತಿ ಮಾಡಲಾಗುತ್ತದೆ. ಒಟ್ಟಾರೆಯಾಗಿ ನೀರಿನ ಕರ ವಸೂಲಿಗೆ ಕ್ರಮ ಕೈಗೊಳ್ಳವುದು ಅನಿವಾರ್ಯವಾಗಿದೆ ಎಂದರು.
ಕಚೇರಿ ಸಿಬ್ಬಂದಿಯು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುಖ್ಯಾಧಿಕಾರಿ ಅವರು, ಕೆಲ ಅಧಿಕಾರಿ ಮತ್ತು ಸಿಬ್ಬಂದಿ ಮನಬಂದಂತೆ ವರ್ತಿಸುತ್ತಿದ್ದಾರೆ. ಸರಿಯಾಗಿ ಕರ್ತವ್ಯ ನಿರ್ವಹಿಸುವವರು ಇಲ್ಲಿ ಇರಿ. ಇಲ್ಲವಾದಲ್ಲಿ ವರ್ಗಾಯಿಸಿಕೊಂಡು ಹೋಗಲು ತಿಳಿಸಿದ್ದೇನೆ. ಹೊರ ಗುತ್ತಿಗೆ ಆಧಾರದಲ್ಲಿ ನೇಮಕವಾದ ಕೆಲ ಸಿಬ್ಬಂದಿಯು ಮಾತು ಕೇಳುತ್ತಿಲ್ಲ. ಅವರನ್ನು ತೆಗೆದು ಹಾಕುವ ಅಧಿಕಾರ ಕೌನ್ಸಿಲ್‌ಗೆ ಇರುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರಾದ ರಾಜೇಶ ಪೈ ಮತ್ತು ಮಹೇಶ ನಾಯ್ಕ ಅವರು ಗುತ್ತಿಗೆ ನೌಕರರಿಗೆ ಒಂದು ತಿಂಗಳು ಅವಕಾಶ ನೀಡಿ, ಇಲ್ಲವಾದಲ್ಲಿ ಅಂತವರನ್ನು ವಜಾಗೊಳಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಅವಧಿ ಮುಕ್ತಾಯಗೊಂಡಿರುವುದರಿಂದ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಸದಸ್ಯ ಕಿರಣ ಅಂಬಿಗ ಅವಿರೋಧವಾಗಿ ಆಯ್ಕೆಯಾದರು. ಸದಸ್ಯರಾದ ಗೀತಾ ಮುಕ್ರಿ ಸೂಚಿಸಿದರು. ಸಂತೋಷ ನಾಯ್ಕ ಅನುಮೋದಿಸಿದರು. ಸರ್ವ ಸದಸ್ಯರು ಅಭಿನಂದಿಸಿದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಸುಮತಿ ಭಟ್ಟ, ಸದಸ್ಯರಾದ ಪಲ್ಲವಿ ಮಡಿವಾಳ, ಶೈಲಾ ಗೌಡ, ತುಳುಸು ಗೌಡ, ಸೂರ್ಯಕಾಂತ ಗೌಡ, ಎಂ.ಟಿ.ನಾಯ್ಕ, ವಿನಯಾ ಜಾರ್ಜ್ , ಗೀತಾ ಮುಕ್ರಿ, ಸೇರಿದಂತೆ ಮತ್ತಿತರರ ಸದಸ್ಯರು ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

300x250 AD
Share This
300x250 AD
300x250 AD
300x250 AD
Back to top