ಕಾರವಾರ: ನಾಡಿನ ಇತಿಹಾಸ, ಪರಂಪರೆಗೆ ವಾಸ್ತುಶಿಲ್ಪಗಳ ಕೊಡುಗೆ ಅಪಾರವಾದುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ವಿಶ್ವ ಕರ್ಮ ಅಮರಶಿಲ್ಪಿ ಜಕಣಾಚಾರಿ ಜನ್ಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಮರಶಿಲ್ಪಿ ಜಕಣಾಚಾರಿ ಅಪರೂಪದ ಕೊಡುಗೆಯನ್ನು ಮತ್ತು ಕಲಾ ಕೌಶಲ್ಯವನ್ನು ನಾಡಿಗೆ ನೀಡಿ ಅಜರಾಮರರಾದರು. ಶಿಲೆಯನ್ನು ಕಲೆಯಾಗಿ ಅರಳಿಸಿದ, ಕರ್ನಾಟಕದ ಇತಿಹಾಸವನ್ನು ಕಲೆ ಮತ್ತು ವಾಸ್ತುಶಿಲ್ಪದಿಂದ ಶ್ರೀಮಂತಗೊಳಿಸಿದ ಮಹಾನ್ ಶಿಲ್ಪಿಯನ್ನು ಸ್ಮರಿಸುವ ಮೂಲಕ ಇತಿಹಾಸದ ಎಲ್ಲಾ ಶಿಲ್ಪಕಾರರಿಗೂ ಸರ್ಕಾರ ಗೌರವಿಸುತ್ತಿದೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ಸಮಾಜಕ್ಕೆ ಅತ್ಯಮೂಲ್ಯ ಎಂದರು.
ಸoಪನ್ಮೂಲ ವ್ಯಕ್ತಿ ಅರುಣ ಆಚಾರ್ಯ, ಅಮರಶಿಲ್ಪಿ ಜಕಣಾಚಾರಿಯವರ ಇತಿಹಾಸ, ಕಲೆ, ಅವರು ಬೆಳೆದು ಬಂದ ದಾರಿ ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಬಗ್ಗೆ ವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ವಾಸುದೇವ ಆಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ಕೆ.ಎಮ್., ಸಮಾಜದವರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.