ಹೊನ್ನಾವರ: ಸಮಾಜದಲ್ಲಿಯ ಅನ್ಯಾಯವನ್ನು ದೂರವಾಗಿಸಲು ಸೂರ್ಯನಂತೆ ಪ್ರಕಾಶ ಕೊಡಲು ಆಗದಿದ್ದರೂ, ಚಿಕ್ಕ ಹಣತೆಯಂತೆ ಸುತ್ತಲೂ ಬೆಳಕನ್ನು ನೀಡಿ ಸುತ್ತಮುತ್ತಲಿನ ಅನ್ಯಾಯ ದೂರವಾಗಿಸುವತ್ತ ನಾವೆಲ್ಲರೂ ಗಮನಹರಿಸಬೇಕಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಬುಧವಾರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸನ್ಮಾನ ಎಂದರೆ ಜವಾಬ್ದಾರಿ ಹೆಚ್ಚಿಸಿಕೊಳ್ಳುವುದು. ಪ್ರತಿಯೋರ್ವರು ನಮ್ಮ ಕ್ಷೇತ್ರದ ಮೇಲೆ ನಂಬಿಕೆ ಮೇಲೆ ಕೆಲಸ ಮಾಡಬೇಕಿದೆ. ನಾವು ಮಾಡುವ ಕಾರ್ಯ ದೇವರ ಕಾರ್ಯದಂತೆ ಪ್ರೀತಿ ಶ್ರದ್ಧೆಯಿಂದ ಕೂಡಿರಬೇಕು. ಇಂದು ಮಾನವೀಯ ಸಂಬಂಧವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅದನ್ನು ಉತ್ತಮ ಪಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ದಿ ಮಾತ್ರ ಮಾನದಂಡವಲ್ಲ. ಆದರೆ ಮೊದಲ ಜವಾಬ್ದಾರಿ ಅಭಿವೃದ್ದಿಯಾಗಿರಬೇಕು.ಅಭಿವೃದ್ದಿ ಎನ್ನುವ ರಥದ ಚಕ್ರಕ್ಕೆ ಜನರ ಅಭಿಮಾನದ ಕೊಂಡಿ ಉಳಿಸಿಕೊಂಡಾಗ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿದೆ. ನಮ್ಮ ಜಿಲ್ಲೆಯು ಸಂಪದ್ಭರಿತವಾಗಿದ್ದು ಅಭಿವೃದ್ದಿಯ ವೇಗ ಹೆಚ್ಚಿಸಿಕೊಂಡಿದೆ. ಸಂಘಟನಾತ್ಮಕ ಶಕ್ತಿಯಿಂದ ಅಭಿವೃದ್ದಿ ಸಾಧ್ಯವಿದೆ. ಜಿಲ್ಲೆಯಲ್ಲಿ ಪ್ರಕೃತಿಯ ಕಾರಣದಿಂದ ಸಮಸ್ಯೆಗಳು ನೂರೆಂಟು ಇವೆ. ಅತಿವೃಷ್ಟಿ, ಕರೋನಾ ಮುಂತಾದ ಸಮಸ್ಯೆಗಳಿವೆ. ಆಯ್ಕೆಯಾದ ಜನಪ್ರತಿನಿಧಿಗಳು ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ. ಜನಾಭಿಪ್ರಾಯ ಮೂಡಿಸುವ ಮೂಲಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಪ್ರತಿಯೊಬ್ಬರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರಾಗಬೇಕು. ಜಾತಿ, ಹಣಬಲ, ತೋಳುಬಲ ಬಿಟ್ಟು ಉತ್ತಮ ರೀತಿಯಲ್ಲಿ ಚುನಾವಣೆ ನಡೆಯಬೇಕಿದೆ. ಈ ಕುರಿತು ರಾಜ್ಯಾದ್ಯಾಂತ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ವೈಚಾರಿಕ ತತ್ವ ಸಿದ್ಧಾಂತವನ್ನು ಎತ್ತರಿಸಬೇಕು ಎಂದರು.
ಸನ್ಮಾನ ನೇರವೇರಿಸಿದ ಶ್ರೀ ಅನ್ನಪೂರ್ಣೆಶ್ವರಿ ದೇವಾಲಯದ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿ ಮಾತನಾಡಿ ಜೀವನದ ಮೌಲ್ಯವನ್ನು ಸಮಾಜಮುಖಿಯನ್ನಾಗಿಸಿ ಜೀವನ ನಡೆಸಿ, ಸಮಾಜದ ದೃಷ್ಟಿಕೋನ ಬದಲಿಸಿ ಅದಕ್ಕೆ ತನ್ನಿಂದ ಕೊಡುಗೆ ನೀಡಲು ಉತ್ಸುಕತೆ ತೋರುವ ಅಪರೂಪದ ರಾಜಕಾರಣಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಶ್ವೇಶ್ವರರಂತೆ ಜನಮಾನಸದಲ್ಲಿ ಶಾಶ್ವತವಾಗಿ ಇರಲಿದ್ದಾರೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ ಅನೇಕ ರಾಜಕಾರಣಿಗಳಿಗೆ ಜಿಲ್ಲೆಯ ಹಲವು ಸಮಸ್ಯೆಗಳಿಗೆ ವಿಧಾನಸೌದದಲ್ಲಿ ಧ್ವನಿಯಾಗಲು ಅವಕಾಶ ಕಲ್ಪಿಸಿದ್ದಾರೆ. ಮುಂದಿನ ದಿನದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭಕೋರಿದರು.
ಪತ್ರಕರ್ತ ಜಿ.ಯು.ಭಟ್ ಅಭಿನಂದನಾ ನುಡಿಗಳನ್ನಾಡಿದರು. ತಾಲೂಕಿನ ಅಭಿನಂದನಾ ಸಮಿತಿ ಹಾಗೂ ವಿವಿಧ ಜನಪ್ರತಿನಿಧಿಗಳು, ಸಂಘ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬಿಜೆಪಿ ಮುಖಂಡರಾದ ಮಂಜುನಾಥ ನಾಯ್ಕ ಸ್ವಾಗತಿಸಿ, ಸುಬ್ರಾಯ ನಾಯ್ಕ ವಂದಿಸಿದರು. ನಿವೃತ್ತ ಪ್ರಾಚಾರ್ಯ ಎಸ್.ಜಿ.ಭಟ್ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಪ.ಪಂ.ಅಧ್ಯಕ್ಷೆ ಭಾಗ್ಯ ಮೇಸ್ತ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಸಮಿತಿಯ ಗೌರವಾಧ್ಯಕ್ಷ ಉಮೇಶ ನಾಯ್ಕ, ಸಮಿತಿ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಉಪಸ್ಥಿತರಿದ್ದರು.
ಜಿಲ್ಲೆಯ ಜನರ ಅಭಿಪ್ರಾಯ ಗಟ್ಟಿಯಾಗಿದೆ ಎನ್ನುವುದಕ್ಕೆ ಇತ್ತೀಚಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೂಗು ಸಾಕ್ಷಿಯಾಗಿದೆ. ಒಗ್ಗಟ್ಟಿನ ಧ್ವನಿಗೆ ಸರ್ಕಾರವೇ ಜನರ ಮಧ್ಯೆ ಬಂದು ಬೇಡಿಕೆ ಈಡೇರಿಸಿದೆ. ಜನಾಭಿಪ್ರಾಯ ರೂಪಿಸುವಾಗ ಹಿಂದೆ ಬೀಳಬಾರದು.
• ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್