ದಾಂಡೇಲಿ: ಡಿ.17 ಮತ್ತು 18ರಂದು ತಾಲೂಕಿನ ಶ್ರೀಕ್ಷೇತ್ರ ಉಳವಿಯಲ್ಲಿ ನಡೆಯಲಿರುವ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಅಂಕೋಲಾದ ಶಾಂತಾರಾಮ ನಾಯಕ ಹಿಚ್ಕಡ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಜಿಲ್ಲೆಯಲ್ಲಿ ಸಾಹಿತ್ಯ ಸೇವೆ ಮಾಡುತ್ತಿದ್ದವರಿಗೆ ಮೊದಲ ಆದ್ಯತೆ ನೀಡಿ, ಅವರ ಸಾಹಿತ್ಯ ಕ್ಷೇತ್ರದ ಸಾಧನೆ, ಸಾಹಿತ್ಯಕ್ಕೆ ನೀಡಿದ ಕೊಡುಗೆ, ವಯಸ್ಸು ಇವೆಲ್ಲವುಗಳನ್ನು ಪರಿಗಣಿಸಿಕೊಂಡು ಶಾಂತಾರಾಮ ನಾಯಕ ಹಿಚ್ಕಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. 84ರ ಇಳಿ ವಯಸ್ಸಿನಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ಉತ್ಸಾಹದಿಂದ ತೊಡಗಿಕೊಂಡಿರುವ ಶಾಂತಾರಾಮ ನಾಯಕ ಹಿಚ್ಕಡ ಅವರ ಸಾಹಿತ್ಯ ಸಾಧನೆ ಅಮೂಲ್ಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪಿ.ಆರ್.ನಾಯ್ಕ, ಜಾರ್ಜ್ ಫರ್ನಾಂಡೀಸ್, ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರು, ಕಸಾಪ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರುಗಳಾದ ರಾಮಾ ನಾಯ್ಕ, ಗೋಪಾಲಕೃಷ್ಣ ನಾಯಕ, ಸುಬ್ಬಯ್ಯ ನಾಯ್ಕ, ಎಸ್.ಎಚ್.ಗೌಡ, ಗಂಗಾಧರ ನಾಯ್ಕ, ಸುಬ್ರಾಯ ಭಟ್, ಸುಬ್ರಹ್ಮಣ್ಯ ಭಟ್, ಸುಮಂಗಲಾ ಅಂಗಡಿ, ಪಾಂಡುರಂಗ ಪಟಗಾರ, ನಾರಾಯಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಶಾಂತಾರಾಮ ನಾಯಕರ ಪರಿಚಯ
ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಸಲ್ಲಿಸಿದ ಹಿರಿಮೆಯನ್ನು ಹೊಂದಿರುವ ಶಾಂತಾರಾಮ ನಾಯಕ ಅವರು ಸಾಹಿತ್ಯ ಚಟುವಟಿಕೆಗಳ ಮೂಲಕ ಕನ್ನಡ ನಾಡಿನ ಸಾರಸ್ವತ ಲೋಕಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಾ ಬಂದಿರುವವರು. ಈಗಾಗಲೆ 8 ಕವನ ಸಂಕಲನ, 5 ಚರಿತ್ರಾ ಕೃತಿ, 6 ಜೀವನ ಚರಿತ್ರೆ, 5 ಪ್ರಬಂಧ ಸಂಕಲನ, 14 ಸಂಪಾದಿತ ಕೃತಿಗಳು, ಕಥಾ ಸಂಕಲನ ಸೇರಿದಂತೆ ಹಲವಾರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಹೆಗ್ಗಳಿಕೆಗೆ ಪಾತ್ರರಾದ ಪರಿಶುದ್ಧ ವ್ಯಕ್ತಿತ್ವ. ಶ್ರೀಕ್ಷೇತ್ರ ಉಳವಿಯಲ್ಲಿ ನಡೆಯಲಿರುವ ಸಾಹಿತ್ಯ ಜಾತ್ರೆಯ ಸರ್ವಾಧ್ಯಕ್ಷರಾಗಿರುವುದು ಸಾಹಿತ್ಯ ಸಮ್ಮೇಳನದ ಗೌರವವನ್ನು ಹೆಚ್ಚಿಸಿದೆ ಎಂದರೆ ಅತಿಶಯೋಕ್ತಿ ಎನಿಸದು.