ಹೊನ್ನಾವರ: ಕಾಸರಕೋಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಐಆರ್ಬಿ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಮಂಗಳವಾರ ನಿಗದಿಪಡಿಸಿದ್ದ ಹೆದ್ದಾರಿ ತಡೆ ಪ್ರತಿಭಟನೆಯ ಸಂಧಾನ ಸಭೆ ಉಪವಿಭಾಗಾಧಿಕಾರಿ ಮಧ್ಯಸ್ಥಿಕೆಯಲ್ಲಿ ಯಶ್ವಸಿಯಾಗಿದೆ.
ಕಾಸರಕೋಡ ಗ್ರಾ.ಪಂ. ವ್ಯಾಪ್ತಿಯ ಇಕೋ ಬೀಚ್, ಅಪ್ಸರಕೊಂಡ, ಶರಾವತಿ ಸೇತುವೆಯಲ್ಲಿ ಬೀದಿದೀಪ ವ್ಯವಸ್ಥೆ ಕಲ್ಪಿಸದೇ ಇರುವುದು, ಹೆದ್ದಾರಿ ಎರಡು ಭಾಗದಲ್ಲಿ ಸಮರ್ಪಕ ಗಟಾರ ವ್ಯವಸ್ಥೆ ನಿರ್ಮಾಣ, ಸರ್ವೀಸ್ ರಸ್ತೆ ಬೇಡಿಕೆಯ ಈಡೇರಿಕೆಗಾಗಿ ಈ ಹಿಂದೆ ಮನವಿ ನೀಡಿದ್ದರು. ಮನವಿಗೆ ಸಂಬಂಧಿಸಿದಂತೆ ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಮಂಗಳವಾರ ಹೆದ್ದಾರಿ ತಡೆದು ಪ್ರತಿಭಟನೆಗೆ ನಿರ್ಧರಿಸಿದ್ದರು.
ಈ ಮಧ್ಯೆ ಸೋಮವಾರ ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯದ ಬಗ್ಗೆ ವಿಸ್ತ್ರೀತ ಚರ್ಚೆ ನಡೆದು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಒಂದು ವಾರ ಸಮಯವಕಾಶ ಕೋರಿದರು. ಇದಕ್ಕೆ ಒಪ್ಪಿಗೆ ಸೂಚಿಸಿ ಪ್ರತಿಭಟನೆಯನ್ನು ಒಂದು ವಾರಕ್ಕೆ ಮುಂದೂಡಿರುವುದಾಗಿ ಗ್ರಾ.ಪಂ.ಅಧ್ಯಕ್ಷ ಮಂಜು ಗೌಡ ಮಾಹಿತಿ ನೀಡಿದ್ದಾರೆ.
ತಹಶೀಲ್ದಾರ ನಾಗರಾಜ ನಾಯ್ಕಡ್, ಸಿಪಿಐ ಶ್ರೀಧರ ಎಸ್.ಆರ್, ವಿವಿಧ ಸಂಘಟನೆಯ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.