ಕಾರವಾರ: ತುಮಕೂರಿನ ಕರ್ನಾಟಕ ಜನತಾ ಸೇನಾ ದಳ ನೀಡುವ ಸ್ವಾಮಿ ವಿವೇಕಾನಂದ ಭಾವೈಕ್ಯ ರತ್ನ ಪ್ರಶಸ್ತಿಯನ್ನ ಈ ಬಾರಿ ಕಾರವಾರದ ಸಮಾಜ ಸೇವಕ, ನಿವೃತ್ತ ಎಎಸ್‌ಐ ಶ್ರೀಕಾಂತ್ ನಾಯ್ಕರಿಗೆ ನೀಡಲಾಯಿತು.
ಸ್ವಾಮಿ ವಿವೇಕಾನಂದರ ಸರ್ವ ಧರ್ಮ ಸಮ್ಮೇಳನದ ಚಿಕಾಗೋ ಭಾಷಣದ 129ನೇ ವರ್ಷಚಾರಣೆಯ ಕಾರ್ಯಕ್ರಮ ಅಂಗವಾಗಿ ಪ್ರತಿ ವರ್ಷ ಪ್ರಶಸ್ತಿಯನ್ನ ನೀಡುತ್ತಿದ್ದು ಈ ಬಾರಿ ಸಿದ್ಧಗಂಗಾ ಮಠದ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಶಿವಕುಮಾರ್ ಸ್ವಾಮೀಜಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಎಂ.ನಾಯ್ಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೇವಾ ನಿವೃತ್ತಿಯ ನಂತರ ಸಾಂತ್ವಾನ ಜನ ಸೇವಾ ಕೇಂದ್ರ ಎನ್ನುವ ಸಂಸ್ಥೆಯನ್ನ ಕಟ್ಟಿಕೊಂಡು ಸಮಾಜ ಸೇವೆಯಲ್ಲಿ ಶ್ರೀಕಾಂತ್ ನಾಯ್ಕ ತೊಡಗಿದ್ದಾರೆ. ಅನಾಥ ಶವ ಸಂಸ್ಕಾರ ಮಾಡುವ, ಅಂಗವಿಕಲರಿಗೆ, ನಿರ್ಗತಿಕರಿಗೆ ಸಹಾಯ ಮಾಡುವ ಸೇರಿದಂತೆ ಹಲವು ಜನಸೇವೆ ಕಾರ್ಯವನ್ನ ಮಾಡುತ್ತಿದ್ದು ಕೊರೋನಾ ಸಂದರ್ಭದಲ್ಲಿ ಹಲವರಿಗೆ ಆಹಾರ ಸಾಮಾಗ್ರಿಗಳನ್ನ ನೀಡಿ ಗಮನ ಸೆಳೆದಿದ್ದರು.
ಹಲವು ವರ್ಷಗಳಿಂದ ಮಾಡುತ್ತಿರುವ ಸಮಾಜಸೇವೆಯನ್ನ ಗುರುತಿಸಿದ ಕರ್ನಾಟಕ ಜನತಾ ಸೇನಾ ದಳ ರಾಜ್ಯ ಸಮಿತಿಯವರು ಶ್ರೀಕಾಂತ್ ನಾಯ್ಕರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇನ್ನು ಪ್ರಶಸ್ತಿ ಸ್ವೀಕರಿಸಿರುವ ಶ್ರೀಕಾಂತ್ ನಾಯ್ಕ ಮಾತನಾಡಿ ನನಗೆ ಪ್ರಶಸ್ತಿಯಾಗಲಿ ಸನ್ಮಾನವಾಗಲಿ, ನಿರೀಕ್ಷೆಯಿಲ್ಲ. ಸಮಾಜದ ಎಲ್ಲಾ ಧರ್ಮ ಜಾತಿಯ ಬಡವರ, ನಿರ್ಗತಿಕರ, ಅನಾಥರ, ಅಂಗವಿಕಲರ ಸೇವೆ ಸಲ್ಲಿಸುವುದರಲ್ಲಿ ಖುಷಿ ಇದೆ. ಆದರೆ ಸಮಾಜದಲ್ಲಿ ನನ್ನಂತವರ ಸಮಾಜ ಸೇವಾ ಮನೋಭಾವದವರು ಉದಯ ಆಗಿ ನನ್ನಿಂದಾದರೂ ಪ್ರೇರಣೆ ಪಡೆದು ಸಮಾಜ ಸೇವೆ ಮಾಡುವಂತಾಗಲಿ ಎಂದರು.