ಹೊನ್ನಾವರ: ಇ- ಸ್ವತ್ತು ಬಗೆಗಿನ ಸಮಸ್ಯೆಯನ್ನು ಬಗೆಹರಿಸದೆ ಜಿಲ್ಲೆಯ ಜನರು ತೊಂದರೆಗೆ ಒಳಗಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯಂತೆ ಉತ್ತರ ಕನ್ನಡ ಜಿಲ್ಲೆಯ ಇ- ಸ್ವತ್ತು ಸಮಸ್ಯೆಯನ್ನು ಸರಳೀಕರಣಗೊಳಿಸಿ ಜಿಲ್ಲೆಯ ಈ ಪ್ರಮುಖ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರನ್ನು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಮರಳು ಸಿಗದೇ ಅಭಿವದ್ಧಿ ಕಾಮಗಾರಿಗಳಿಗೆ ಹಿನ್ನಡೆ ಉಂಟಾಗಿದೆ. ಹಿಂದೆ ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ಮರಳುಗಾರಿಕೆಯಿಂದ ಸಂಗ್ರಹವಾಗುತ್ತಿದ್ದ ರಾಜಧನದ ಶೇ 25ರಷ್ಟು ಪಾಲು ಅಭಿವೃದ್ಧಿ ಅನುದಾನದ ರೂಪದಲ್ಲಿ ಲಭ್ಯವಾಗುತ್ತಿತ್ತು. ಆದರೆ ಗ್ರಾಮ ಪಂಚಾಯತಿಗಳಿಗೆ ಪಾವತಿಯಾಗುತ್ತಿದ್ದ ಈ ಅನುದಾನ ಕಳೆದ 4 ವರ್ಷಗಳಿಂದ ಸ್ಥಗಿತವಾಗಿದ್ದು, ನರೇಗಾ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನವಾಗದೇ ಗ್ರಾಮ ಪಂಚಾಯಿತಿಗಳು ನಾಮಕಾವಾಸ್ತೆ ಎನ್ನುವಂತಾಗಿದೆ. ಪಂಚಾಯತರಾಜ್ ವ್ಯವಸ್ಥೆಗೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ ಅನುಷ್ಠಾನದಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಸುಪ್ರೀಂ ಕೋರ್ಟ್ಗೆ ಅರಣ್ಯವಾಸಿಗಳ ಪರವಾಗಿ ತಿದ್ದುಪಡಿ ಪ್ರಮಾಣ ಪತ್ರವನ್ನು ಸಲ್ಲಿಸಲು ನಾವು ಅನೇಕ ಬಾರಿ ಸಚಿವರನ್ನು ಕಂಡು ಕೋರಿದ್ದೆವು. ಹಿಂದುಳಿದ ವರ್ಗದ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದವರೆಂದೇ ಪ್ರತೀತಿ ಇರುವ ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿಯವರು ಜಿಲ್ಲೆಯ ಈ ಪ್ರಮುಖ ಸಮಸ್ಯೆಯನ್ನು ಬಗೆಹರಿಸುವರೆಂದು ನಿರೀಕ್ಷಿಸಲಾಗಿತ್ತು. ಆದರೆ ಹೊನ್ನಾವರದಲ್ಲಿ ಉನ್ನತಾಧಿಕಾರಿಗಳ ಮಟ್ಟದ ಸಭೆಯ ಅಯೋಜನೆಗಾಗಿ ಅಧಿಕಾರಿಗಳಿಗೆ ಟಿಪ್ಪಣಿ ಬರೆದಿದ್ದು ಬಿಟ್ಟರೆ ಟಿಪ್ಪಣಿಗೆ ಅಧಿಕಾರಿಗಳಿಂದ ನಿರೀಕ್ಷಿತ ಸ್ಪಂದನೆ ಸಿಗದಿರುವುದು ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ಆದ್ದರಿಂದ ಈಗಲಾದರೂ ಉಸ್ತುವಾರಿ ಸಚಿವರು ಜಿಲ್ಲೆಯ ಈ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಪ್ರವೇಶ ಮಾಡಬೇಕೆಂದು ಅವರು ಸಚಿವರನ್ನು ಒತ್ತಾಯಿಸಿದ್ದಾರೆ.