ಮುಂಡಗೋಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ವಿ.ಎಸ್.ಪಾಟೀಲ್ ಅವರ ನಾಮನಿರ್ದೇಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶಿಸಿದೆ. ರದ್ದು ಮಾಡಲು ಕಾರಣವನ್ನು ಉಲ್ಲೇಖಿಸಿಲ್ಲ.
ಬಿ.ಜೆ.ಪಿ.ಗೆ ವಲಸೆ ಬಂದಿರುವವರಿಂದ ತಮಗೆ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷ ಸೇರ್ಪಡೆಯ ಬಗ್ಗೆ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಹೇಳುವುದಾಗಿ ಪಾಟೀಲ ಕೆಲವು ದಿನಗಳಿಂದ ಹೇಳಿಕೊಳ್ಳುತ್ತಿದ್ದರು.
ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾಗಿರುವ ಪಾಟೀಲ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಆದರೆ, ಈ ಬಗ್ಗೆ ಪಕ್ಷದ ಮುಖಂಡರಿಂದ ಯಾವುದೇ ಭರವಸೆ ಸಿಗದಿರುವುದು ಅವರ ಬೇಸರಕ್ಕೆ ಕಾರಣ ಎನ್ನಲಾಗಿದೆ.
‘ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದ ಬಳಿಕ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೂ ನಿಗಮದ ವಾಹನವನ್ನು ಬುಧವಾರ ಹುಬ್ಬಳ್ಳಿಯಲ್ಲಿಯೇ ಬಿಟ್ಟು, ಖಾಸಗಿ ವಾಹನದಲ್ಲಿ ಮುಂಡಗೋಡಕ್ಕೆ ಬಂದಿದ್ದೇನೆ. ನಿಗಮದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡಿರುವುದು ಒಳ್ಳೆಯದೇ ಆಗಿದೆ. ಇಲ್ಲವಾದರೆ ಅವರ ಹಂಗಿನಲ್ಲಿ ಇರಬೇಕಾಗಿತ್ತು. ಕಾಂಗ್ರೆಸ್ ಸೇರಲು ದಾರಿ ಈಗ ಸುಗಮವಾಗಿದೆ’ ಎಂದು ಹೇಳಿದ್ದಾರೆ.