ದಾಂಡೇಲಿ: ನಗರದಲ್ಲಿ ಬಿಡಾಡಿ ದನ ಕರುಗಳ ಸಂಖ್ಯೆ ಮೀತಿ ಮೀರಿ ಏರುತ್ತಿದ್ದು, ಜನಜೀವನಕ್ಕೆ ತೊಂದರೆಯಾಗುವುದರ ಜೊತೆಗೆ ವಿವಿಧ ರೋಗ ರುಜಿನಗಳಿಗೆ ಹಾಗೂ ಅಪಘಾತಗಳಿಗೆ ತುತ್ತಾಗಿ ಬಿಡಾಡಿ ದನಕರುಗಳು ಕಣ್ಣಮುಂದೆ ಸಾಯುತ್ತಿರುವಂತಹ ಹೃದಯವಿದ್ರಾವಕ ಘಟನೆಗಳು ನಡೆಯುವಂತಾಗಿದೆ.
ಬಿಡಾಡಿ ದನಕರುಗಳ ನಿಯಂತ್ರಣಕ್ಕೆ ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ನಗರಸಭೆಯವರು ಅಗತ್ಯ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಹೆಸರಿಗಷ್ಟೆ ಕೊಂಡವಾಡವನ್ನಿಟ್ಟುಕೊಂಡಿರುವ ನಗರಸಭೆಯ ಕೊಂಡವಾಡದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ನಗರಸಭೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ರೋಗದಿಂದ ನರಳಾಡುತ್ತಿರುವ ಬಿಡಾಡಿ ದನ ಕರುಗಳನ್ನು ನಗರ ಸಭೆಯ ಮುಂಭಾಗದಲ್ಲಿಟ್ಟು ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಮುಂಚೆ ನಗರಸಭೆ ಎಚ್ಚೆತ್ತುಕೊಳ್ಳಬೇಕೆಂದು ನಗರದ ಹಿರಿಯ ಮುಖಂಡರು ಹಾಗೂ ಗೋಸಂರಕ್ಷಣಾ ಸಮಿತಿಯ ಪ್ರಮುಖರಾದ ವಾಸುದೇವ ಪ್ರಭು ಅವರು ಎಚ್ಚರಿಕೆ ನೀಡಿದ್ದಾರೆ.