ಹೊನ್ನಾವರ:ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯ ಬಣಸಾಲೆಯಲ್ಲಿರುವ ಮೀನು ಮಾರುಕಟ್ಟೆ ಸೋರುತ್ತಿದ್ದು, ಮಳೆಯಲ್ಲೇ ವ್ಯಾಪಾರ ಮತ್ತು ಖರೀದಿ ಮಾಡಬೇಕಾದ ಅನಿವಾರ್ಯತೆ ಇತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಪ.ಪಂ., ಕಟ್ಟಡದ ದುರಸ್ಥಿ ಸಂಬಂಧ ಅಲ್ಲಿ ಮೀನು ವ್ಯಾಪಾರ ಮಾಡದಂತೆ ಆದೇಶ ಮಾಡಿದೆ.
ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು,ದುರಸ್ಥಿ ಕಾಮಗಾರಿಯು ವಿಳಂಬವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸದ್ರಿ ಮೀನು ಮಾರುಕಟ್ಟೆಯನ್ನು ನೋಟೀಸು ಪ್ರಕಟಿಸಿದ ಮೂರು ದಿನಗಳ ಒಳಗೆ ಪಟ್ಟಣ ಪಂಚಾಯತ ವಶಕ್ಕೆ ತೆಗೆದುಕೊಳ್ಳಲಾಗುವುದು ಹಾಗೂ ಈವರೆಗೂ ಪಟ್ಟಣ ಪಂಚಾಯತದಿಂದ ನೆಲಬಾಡಿಗೆ ಅಥವಾ ಇತರೆ ಶುಲ್ಕವನ್ನು ನಿಗದಿಪಡಿಸಿ ವಸೂಲಿ ನಡೆಸಿರುವುದಿಲ್ಲ. ಅನಧಿಕೃತವಾಗಿ ಈವರೆಗೆ ಯಾರಾದರೂ ವಸೂಲಿ ಕಾರ್ಯನಡೆಸಿದ್ದಲ್ಲಿ ಪಟ್ಟಣ ಪಂಚಾಯತ ಗಮನಕ್ಕೆ ತನ್ನಿ ಎಂದು ಪ.ಪಂ.ಮುಖ್ಯಾಧಿಕಾರಿ ಅಜೇಯ್ ಬಂಡಾರಕರ್ ತಿಳಿಸಿದ್ದಾರೆ. ನೋಟೀಸು ತಲುಪಿದ ನಂತರವೂ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದಲ್ಲಿ ಮೀನು ಮಾರುವವರನ್ನೇ ನೇರ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.