ನವದೆಹಲಿ: ಬ್ರೌನ್‌ಫೀಲ್ಡ್ ಮತ್ತು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಲು ಯೋಜಿಸಲಾಗಿರುವುದರಿಂದ ವಿಮಾನ ನಿಲ್ದಾಣಗಳ ಆಧುನೀಕರಣವು ವೇಗವಾಗಿ ಮುಂದುವರಿಯುತ್ತಿದೆ ಎಂದು ಕೇಂದ್ರ ಹೇಳಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಮತ್ತು ಇತರ ವಿಮಾನ ನಿಲ್ದಾಣ ನಿರ್ವಾಹಕರು ವಿಮಾನ ನಿಲ್ದಾಣಗಳ ಆಧುನೀಕರಣಕ್ಕಾಗಿ 2019-20 ರಿಂದ 2024-25 ರವರೆಗೆ 90,000 ಕೋಟಿ ರೂ.ಗಿಂತ ಹೆಚ್ಚಿನ ಬಂಡವಾಳವನ್ನು ಗುರಿಪಡಿಸಿದ್ದಾರೆ ಎಂದಿದೆ.
ಅಸ್ತಿತ್ವದಲ್ಲಿರುವ ಏರ್‌ಪೋರ್ಟ್ ಟರ್ಮಿನಲ್‌ಗಳ ವಿಸ್ತರಣೆ ಮತ್ತು ಮಾರ್ಪಾಡು, ಹೊಸ ಟರ್ಮಿನಲ್ ಕಟ್ಟಡಗಳ ನಿರ್ಮಾಣ, ಅಸ್ತಿತ್ವದಲ್ಲಿರುವ ರನ್‌ವೇಗಳು ಮತ್ತು ಅಪ್ರಾನ್‌ಗಳ ವಿಸ್ತರಣೆ ಅಥವಾ ಬಲವರ್ಧನೆ, ಏರ್‌ಪೋರ್ಟ್ ನ್ಯಾವಿಗೇಷನ್ ಸರ್ವೀಸಸ್ (ANS), ಕಂಟ್ರೋಲ್ ಟವರ್‌ಗಳು, ಟೆಕ್ನಿಕಲ್ ಬ್ಲಾಕ್‌ಗಳು ಇತ್ಯಾದಿಗಳನ್ನು ಹಲವಾರು ವಿಮಾನ ನಿಲ್ದಾಣಗಳಲ್ಲಿ ವಿಸ್ತರಿಸಲು ಈ ಬಂಡವಾಳ ವಿನಿಯೋಗಿಸಲಾಗುತ್ತದೆ ಎಂದಿದೆ.
ನಿನ್ನೆ ಲೋಕಸಭೆಗೆ ಲಿಖಿತ ಉತ್ತರದಲ್ಲಿ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ ಕೆ ಸಿಂಗ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರದ ಹೂಡಿಕೆಯ ಜೊತೆಗೆ ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಾಗಿದೆ ಎಂದಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ, AAI ತನ್ನ ಆರು ವಿಮಾನ ನಿಲ್ದಾಣಗಳನ್ನು ಗುತ್ತಿಗೆಗೆ ನೀಡಿದೆ. ದೀರ್ಘಾವಧಿಯ ಗುತ್ತಿಗೆ ಆಧಾರದ ಮೇಲೆ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಕಾಣಲಿದೆ ಎಂದಿದ್ದಾರೆ.
ಕೃಪೆ-https://news13.in/