ಕಾರವಾರ: ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಪರಿಶಿಷ್ಟ ಜಾತಿ, ಪಂಗಡಗಳ ಮೇಲೆ ಜಾತಿ, ಧರ್ಮ ಬೇಧ ತಾರತಮ್ಯಗಳ ನಡುವೆ ದೌರ್ಜನ್ಯಗಳು ನಡೆಯುತ್ತಿದ್ದವು, ಭಾರತ ದೇಶವು ಸ್ವಾತಂತ್ರ್ಯ ಬಂದ ನಂತರ ಡಾ. ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನದಿಂದ ಜಾತಿ, ಧರ್ಮ, ಲಿಂಗ ತಾರತಮ್ಯ ಭೇಧ ಭಾವಗಳ ದೌರ್ಜನ್ಯಗಳಿಂದ ಪ್ರತಿಯೊಬ್ಬರಿಗೂ ರಕ್ಷಣೆ ದೊರೆತಿದೆ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಲಾದ ಸಮಾಜ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ನಾಗರಿಕ ಹಕ್ಕು ರಕ್ಷಣಾ ಕಾಯ್ದೆ 1955 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ ಹಾಗೂ ಯೋಜನೆಗಳ ಬಗ್ಗೆ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಡಾ. ಬಿ. ಆರ್ ಅಂಬೇಡ್ಕರ್ ರವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ರಚಿಸಿದ ಸಂವಿಧಾನದಿಂದ ನಾವೆಲ್ಲರೂ ಸ್ವಾತಂತ್ರವಾಗಿ ಬದುಕಲು ಸಾಧ್ಯವಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ, ಪಂಗಡದವರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಯೋಜನೆಗಳ ಮೂಲಕ ಸವಲತ್ತುಗಳು ಕಲ್ಪಿಸಲಾಗಿದೆ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗಾಗಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ, ವಸತಿ ಶಾಲೆ, ಊಟ ಮತ್ತು ವಿದ್ಯಾಭ್ಯಾಸಕ್ಕೆ ಅಗತ್ಯ ಪೂರಕ ಪರಿಕರಗಳು ಕಲ್ಪಿಸಲಾಗಿದೆ. ಈ ಎಲ್ಲಾ ಯೋಜನೆಗಳು ವಿದ್ಯಾರ್ಥಿಗಳಿಗೆ ಪರಿಪೂರ್ಣ ವ್ಯಕ್ತಿತ್ವದ ಜೊತೆಯಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿವೆ. ಸಂವಿಧಾನದ ಒಳ ಆಶಯಗಳನ್ನು ಮುಂದುವರಿಸಿಕೊಂಡು ದೇಶದ ಸುಭದ್ರ ಬುನಾದಿ ನಿರ್ಮಿಸಲು ನಾವೆಲ್ಲರೂ ಶ್ರಮಿಸೋಣ ಎಂದರು.
ಶಿರಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವ ಮೂರ್ತಿ ಇಮ್ಮಡಿ , ಸಮಾಜ ಕಲ್ಯಾಣ ಇಲಾಖೆ ಮೂಲಕ ನೀಡುವ ವಿದ್ಯಾರ್ಥಿ ವೇತನ, ವಸತಿ ನಿಲಯ, ಪ್ರೋತ್ಸಾಹಧನ, ಉದ್ಯೋಗ, ವಸತಿ, ಸ್ವಾಲಂಬನೆ ಜೀವನ ಸಾಗಿಸಲು ನೀಡುವ ಪ್ರೋತ್ಸಾಹಧನ ಇತರೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡ ವರ್ಗದ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ , ಜನನದಿಂದ ಮರಣದವರಿಗೆ ಅನೇಕ ನಿಗಮಗಳ ಮೂಲಕ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಮೂಲಭೂತ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯು ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪೊಲೀಸ್ ಅಧಿಕಾರಿ ಪ್ರಕಾಶ ದೇವಾಡಿಗ ದೌರ್ಜನ್ಯ ಕಾಯ್ದೆ ಬಗ್ಗೆ, ಹಳಿಯಾಳದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ಪವಾರ್ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಹಾಗೂ ಪ್ರೊತ್ಸಾಹಧನಗಳ ಕುರಿತು ಹಾಗೂ ಅನೀಲ್ ಬಿರದಾರ ಸ್ವಯಂ ಉದ್ಯೋಗದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಗಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೈ. ಕೆ ಉಮೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಆಡಳಿತ) ನಾಗೇಶ್ ರಾಯ್ಕರ್ , ಸಮಾಜ ಕಲ್ಯಾಣ ಇಲಾಖೆಯ ಪ್ರ.ದ.ಸ ರಮೇಶ್ ಎನ್ ನಾಯ್ಕ ಜಿಲ್ಲಾಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಮತ್ತಿತರರು ಇದ್ದರು.