Slide
Slide
Slide
previous arrow
next arrow

ಕದಂಬ ಕನ್ನಡ ಜಿಲ್ಲೆ ಹೋರಾಟ; ಡಿ.6ಕ್ಕೆ ಬನವಾಸಿಯಲ್ಲಿ ಬೃಹತ್ ಮೆರವಣಿಗೆ; ಮನವಿ ಸಲ್ಲಿಕೆ

300x250 AD

ಶಿರಸಿ: ಘಟ್ಟದ ಮೇಲಿನ ಏಳು ತಾಲೂಕುಗಳನ್ನು ಒಳಗೊಂಡು ಪ್ರತ್ಯೇಕ ಜಿಲ್ಲೆ ರಚನೆ ಆಗಲೇಬೇಕು. ನೂತನವಾಗಿ ಕದಂಬ ಕನ್ನಡ ಜಿಲ್ಲೆಗೆ ನಮ್ಮ ಬನವಾಸಿ ಭಾಗದ ಸಂಪೂರ್ಣ ಬೆಂಬಲವಿದೆ. ಕದಂಬ ಕನ್ನಡ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಹೋರಾಟಗಳು ನಡೆಯಬೇಕು. ಈ ಹಿನ್ನಲೆಯಲ್ಲಿ ಡಿ. 6 ರಂದು ಬನವಾಸಿಯ ಶ್ರೀಮಧುಕೇಶ್ವರ ದೇವಾಲಯದಿಂದ ಬೃಹತ್ ಮೆರವಣಿಗೆ ಹೊರಟು, ಉಪತಹಶೀಲ್ದಾರ ಕಛೇರಿಗೆ ಮನವಿ ಸಲ್ಲಿಸಲು ಒಕ್ಕೊರಲಾಗಿ ನಿರ್ಣಯ ಮಾಡಲಾಯಿತು.

ಬುಧವಾರ ಬನವಾಸಿಯ‌ ದೇವಾಲಯದ ಸಭಾಂಗಣದಲ್ಲಿ ನಡೆದ ಕದಂಬ ಕನ್ನಡ ಜಿಲ್ಲೆಗಾಗಿ ಜನಜಾಗೃತಿ ಸಭೆಯಲ್ಲಿ ಸ್ಥಳೀಯ ಹಿರಿಕಿರಿಯ ಸಾಮಾಜಿಕ ಕಾರ್ಯಕರ್ತರು, ಪ್ರಮುಖರು, ಮುಖಂಡರು ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡು, ಸಲಹೆ-ಸೂಚನೆ ನೀಡಿದರು.

ಸಂಘಟನೆಯ ಎಂ.ಎಂ. ಭಟ್ಟ ಮಾತನಾಡಿ, ಕದಂಬ ಕನ್ನಡ ಜಿಲ್ಲೆ ಪ್ರತ್ಯೇಕ ಜಿಲ್ಲೆಯ ಕನಸು ಮೂರು ದಶಕದ ಹಿಂದೆಯೇ ಚಿಗುರಿತ್ತು. ಡಾ. ಸೋಂದೆ, ಎನ್.ಎಸ್. ಹೆಗಡೆ ಮಾಳೇನಳ್ಳಿ, ಉಪೇಂದ್ರ ಪೈ ಅವರ ನೇತೃತ್ವದಲ್ಲಿ ಕಳೆದ 8-10 ವರ್ಷಗಳಿಂದ ನಡೆಯುತ್ತಿದೆ. ನಂತರ ಕೆಲ ಕಾರಣಾಂತರದಿಂದ ಹೋರಾಟ ಕಳೆಗುಂದಿತ್ತು. ಇದೀಗ ಯುವಕರಾಗಿರುವ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಮತ್ತೆ ಹೋರಾಟಕ್ಕೆ ಬಲ ನೀಡಿ, ಆರಂಭಿಸಲಾಗಿದೆ. ಅನಂತಮೂರ್ತಿ ಅವರು ಸಂಘಟನೆಯನ್ನು ಮಾಡುವಲ್ಲಿ ದಕ್ಷರಾಗಿದ್ದಾರೆ. ಅವರಿಗಿರುವ ಹೋರಾಟದ ಪ್ರವೃತ್ತಿ, ಸ್ಪಷ್ಟ ಗುರಿ ಮತ್ತು ಸಂಘಟನಾ ಚಾತುರ್ಯ ಜಿಲ್ಲೆ ರಚನೆ ಹೋರಾಟಕ್ಕೆ ಬಲ ನೀಡುತ್ತದೆ ಎಂದರು.

ಬನವಾಸಿ ಕೇವಲ ಪ್ರೇಕ್ಷಣೀಯ ಸ್ಥಳವಲ್ಲ. ಒಂದು ಕಾಲದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ, ಆಡಳಿತ ಚುಕ್ಕಾಣಿಯ ಪ್ರಮುಖ ನಗರವಾಗಿತ್ತು. ಆದರೆ ನಂತರದಲ್ಲಿ ಅದನ್ನು ಅಭಿವೃದ್ಧಿಯೆಡೆಗೆ ಮುಂದುವರೆಸುವಲ್ಲಿ ಆಡಳಿತ ಹಿಡಿದ ಸರಕಾರಗಳು ವಿಫಲವಾದವು. ಜಿಲ್ಲಾಕೇಂದ್ರ ಬಹುದೂರದಲ್ಲಿರುವುದು ಎಲ್ಲರಿಗೂ ತಿಳಿದಿದೆ. ಈಗ ನಾವು ಅನುಭವಿಸುತ್ತಿರುವ ಸಮಸ್ಯೆಗಳ ಅರಿವು ಎಲ್ಲರಿಗೂ ಇದೆ. ಕದಂಬರ ಆಡಳಿತ ಇಡೀ ರಾಜ್ಯಕ್ಕೆ ಮಾದರಿಯಾಗಿದೆ‌. ಇದೀಗ ಕದಂಬರ ಹೆಸರನ್ನು ಸ್ಮರಿಸುವ ಕದಂಬ ಕನ್ನಡ ಜಿಲ್ಲೆ ರಚನೆಗೆ ಹೋರಾಟಕ್ಕೆ ನಾವೆಲ್ಲ ಸೇರಿ ಜೊತೆಯಾಗಿ ಹೋರಾಡೋಣ ಎಂದರು.

ಖ್ಯಾತ ಧುರೀಣರಾದ ಜಯಶೀಲ ಗೌಡರ್ ಮಾತನಾಡಿ, ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಇಂದಿನ ಪರಿಸ್ಥಿತಿ ನೋಡಿದ್ರೆ ನಮಗೆ ನಾಚಿಕೆಯಾಗುತ್ತದೆ. ಬೇರೆ ಬೇರೆ ರಾಜ್ಯದಿಂದ, ವಿದೇಶಗಳಿಂದ ಪ್ರವಾಸಿಗರು ಈ ಬನವಾಸಿಗೆ ಪ್ರತಿನಿತ್ಯ ಬರುತ್ತಾರೆ. ಆದರೆ ಬನವಾಸಿ ಮಾತ್ರ ಅಭಿವೃದ್ಧಿಯತ್ತ ಸಾಗುತ್ತಿಲ್ಲ. ಅಭಿವೃದ್ಧಿಗೆ, ಹೋರಾಟಕ್ಕೆ ಅಡ್ಡಗಾಲು ಹಾಕುವವರೇ ಜಾಸ್ತಿ.‌ ಈ ಕದಂಬ ಕನ್ನಡ ಜಿಲ್ಲೆ ಹೋರಾಟದಲ್ಲಿ ನಾನು ಸಂತಸದಿಂದ ಭಾಗಿಯಾಗುತ್ತೇನೆ ಎಂದರು.

ಉದಯಕುಮಾರ ಕಾನಳ್ಳಿ ಮಾತನಾಡಿ, ಕದಂಬ ಕನ್ನಡ ಜಿಲ್ಲೆ ಹೆಸರಿನ ಮೂಲಕ ಬನವಾಸಿಯ ಹೆಸರನ್ನು ಚಿರಸ್ಥಾಯಿಯನ್ನಾಗಿಸುವ ಮೊದಲ ಪ್ರಯತ್ನಕ್ಕೆ ನನಗೆ ಖುಷಿಯಿದೆ. ಜಿಲ್ಲಾಕೇಂದ್ರ ಕಾರವಾರ ಬನವಾಸಿಯಿಂದ 150 ಕಿ.ಮೀ ದೂರದಲ್ಲಿದೆ. ನಮ್ಮ ಜನರ ಸಮಸ್ಯೆಗಳಿಗೆ ಕಾರವಾರದ ಜಿಲ್ಲಾಕೇಂದ್ರದಿಂದ ಪರಿಹಾರ ದೊರೆಯುವುದು ವಿಳಂಬವಾಗುತ್ತಿದೆ. ಈ ಎಲ್ಲ ಕಾರಣಕ್ಕೆ ನಾವೆಲ್ಲ ಒಕ್ಕೊರಲಾಗಿ ಕದಂಬ ಕನ್ನಡ ಜಿಲ್ಲೆಗಾಗಿ ಧ್ವನಿಗೂಡಿಸಬೇಕಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ರಮೇಶ ನಾಯ್ಕ, ಹಾಲಪ್ಪನವರ ಜಕ್ಕಣ್ಣನವರ್, ವಿರೂಪಾಕ್ಷ ನಾಯಕ್ ಭಾಶಿ ಸೇರಿದಂತೆ ಸಾರ್ವಜನಿಕರು ಕದಂಬ ಕನ್ನಡ ಜಿಲ್ಲೆ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಉಮಾಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಭೆಯಲ್ಲಿ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಸ್ಥಳೀಯ ಪ್ರಮುಖರಾದ ಜಯಶೀಲ ಗೌಡರ್, ಗಣೇಶ ಸಣ್ಣಲಿಂಗಣ್ಣನವರ್, ಉದಯಕುಮಾರ ಕಾನಳ್ಳಿ, ಹಾಲಪ್ಪ ಜಕ್ಕಣ್ಣನವರ್, ಅರವಿಂದ ಶೆಟ್ಟಿ, ಮಂಜುನಾಥ ಪಾಟೀಲ್, ಪ್ರೇಮಕುಮಾರ ನಾಯ್ಕ, ಮೃತ್ಯುಂಜಯ ದಾವಣಗೆರೆ, ರಮೇಶ ನಾಯ್ಕ, ವಿಶ್ವನಾಥ ಹಾದಿಮನೆ, ಶೋಭಕ್ಕ ಸೇರಿದಂತೆ ಪ್ರಮುಖರು ಇದ್ದರು.

ಖೋಟ್ :

ಕನ್ನಡದ ಮೊದಲ ರಾಜಧಾನಿಯಾದ ಬನವಾಸಿಯನ್ನು ಸರಕಾರಗಳು ಕಡೆಗಣಿಸಿದ್ದು ಅಕ್ಷಮ್ಯ. ಕದಂಬರನ್ನು ಮರೆತು ಈ ಪ್ರದೇಶವಿಲ್ಲ. ನಾವೆಲ್ಲರೂ ಒಕ್ಕೊರಲಾಗಿ ಕದಂಬ ಕನ್ನಡ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಹೋರಾಟ ಮಾಡೋಣ.

300x250 AD
  • ಅನಂತಮೂರ್ತಿ ಹೆಗಡೆ,ಅಧ್ಯಕ್ಷರು, ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್‌

ಬನವಾಸಿ ತಾಲೂಕು ಕ್ಷೇತ್ರವಾದರೆ ಮಾತ್ರ ಅಭಿವೃದ್ಧಿ ಸಾಧ್ಯ. ರಾಜಕೀಯ ಇಚ್ಛಾಶಕ್ತಿಯಿದ್ದರೆ ಮಾತ್ರ ಪ್ರತ್ಯೇಕ ಜಿಲ್ಲಾ ರಚನೆ ಸಾಧ್ಯ. ಕದಂಬ ಕನ್ನಡ ಜಿಲ್ಲಾ ಹೋರಾಟಕ್ಕೆ ನಾವೆಲ್ಲ ಸಕ್ರಿಯರಾಗಿ ಭಾಗಿಯಾಗುತ್ತೇವೆ.

  • ಮುತ್ತಣ್ಣ ದಾವಣಗೆರೆ, ಹಿರಿಯ ಸಾಮಾಜಿಕ ಕಾರ್ಯಕರ್ತರು

ಯಾವುದೇ ಕಾರಣಕ್ಕೂ ಕದಂಬ ಕನ್ನಡ ಜಿಲ್ಲೆಯಾಗಲೇಬೆಕು. ಎಲ್ಲರೂ ಒಗ್ಗಟ್ಟಾಗಿ, ಒಕ್ಕೊರಲಾಗಿ ಜಿಲ್ಲೆಯ ರಚನೆಗೆ ಆಗ್ರಹಿಸೋಣ. —
ಗಣಪತಿ ಚನ್ನಯ್ಯ, ಶಿರಸಿ ತಾಲೂಕು ಅಧ್ಯಕ್ಷರು, ಕರ್ನಾಟಕ ದಲಿತ ಸಂಘರ್ಷ ಸಮಿತಿ

ಜಿಲ್ಲೆ ರಚನೆಗಾಗಿ ಕೇವಲ ಸಭೆಗಳನ್ನು ಮಾತ್ರ ಮಾಡಿದರೆ ಜಿಲ್ಲೆಯಾಗುವುದು ತಡವಾಗಬಹುದು. ನಮ್ಮ ಹೋರಾಟವನ್ನು ಉಗ್ರವಾಗಿ ರೂಪಿಸಬೇಕು. —
ವಿಶ್ವನಾಥ ಹಾದಿಮನೆ, ಸಾಮಾಜಿಕ ಕಾರ್ಯಕರ್ತರು

ನಮ್ಮ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳನ್ನು ನಾವು ಮೂರ್ನಾಲ್ಕು ಬಾರಿ ಆರಿಸಿ ಕಳಿಸಿದ್ದೇವೆ. ಈಗ ನಮ್ಮ ಆದ್ಯತೆ ಜಿಲ್ಲೆ ರಚನೆ ಮಾತ್ರ ಆಗಿದೆ. ನಾವೆಲ್ಲರೂ ಒಕ್ಕೊರಲಾಗಿ ನಮ್ಮ ಜನಪ್ರತಿನಿಧಿಗಳನ್ನು ಜಿಲ್ಲೆ ರಚನೆಗಾಗಿ ಆಗ್ರಹಿಸೋಣ –
ವಿ.ಎಂ.ಭಟ್ಟ

ಬನವಾಸಿಯಲ್ಲಿ ಪ್ರಾಧಿಕಾರವಿದ್ದರೂ ಅಭಿವೃದ್ಧಿಗೆ ತೊಡಕಾಗಿದೆ. ಒಂದು ಕಾಲದಲ್ಲಿ ರಾಜ್ಯದ ರಾಜಧಾನಿಯಾಗಿದ್ದ ಬನವಾಸಿ ಇದೀಗ ಅಭಿವೃದ್ಧಿಯಲ್ಲಿ ಬಹಳ ಹಿಂದಿದೆ. ಬನವಾಸಿ ಅಭಿವೃದ್ಧಿ ಹೊಂದಬೇಕಾದರೆ ತಾಲೂಕು ಸ್ಥಾನಮಾನ ದೊರೆಯಲೇಬೇಕು.‌ –
ಉದಯಕುಮಾರ ಕಾನಳ್ಳಿ

ಬಾಕ್ಸ್ :

ಬನವಾಸಿ ತಾಲೂಕು ರಚನೆಗಾಗಿ ಕೇಳಿಬಂದ ಜನಾಗ್ರಹ:
ಬನವಾಸಿಯಲ್ಲಿ ನಡೆದ ಕದಂಬ ಕನ್ನಡ ಜಿಲ್ಲೆ ಜನಜಾಗೃತಿ ಸಭೆಯಲ್ಲಿ ಒಕ್ಕೊರಲಾಗಿ ಜಿಲ್ಲೆ ರಚನೆಗೆ ಬೆಂಬಲ ನೀಡಿದರು. ಆದರೆ ಇದೇ ವೇಳೆ ಬನವಾಸಿ ತಾಲೂಕು ರಚನೆಗಾಗಿಯೂ ಆಗ್ರಹ ಮಾಡಬೇಕೆಂಬ ಮಾತುಗಳ ಜನರಿಂದ ಕೇಳಿಬಂದವು. ಕದಂಬ ಕನ್ನಡ ಜಿಲ್ಲಾ ರಚನೆ ಟ್ರಸ್ಟ್ ನ ಬೈಲಾದಲ್ಲಿಯೇ ಬನವಾಸಿ ತಾಲೂಕನ್ನಾಗಿಸುವ ಅಜೆಂಡಾ ಇರುವುದು ಎಂದಾಗ ಸಭೆ ಚಪ್ಪಾಳೆ ಮೂಲಕ ಪೂರ್ಣ ಸಹಕಾರ ನೀಡುವುದಾಗಿ ಘೋಷಣೆ ಮಾಡಿತು.

Share This
300x250 AD
300x250 AD
300x250 AD
Back to top