ದಾಂಡೇಲಿ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ವಿಸ್ತರಣಾ ಕೇಂದ್ರ ದಾಂಡೇಲಿ, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ, ಸಾರ್ವಜನಿಕ ಆಸ್ಪತ್ರೆ ರಕ್ತ ನಿಧಿ ಕೇಂದ್ರ ದಾಂಡೇಲಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕಾಳಿ ದ್ವಿಚಕ್ರ ವಾಹನಗಳ ದುರಸ್ತಿಗಾರರ ಸಂಘ ಮತ್ತು ಸಬ್ ಕಾ ಮಾಲಿಕ್ ಏಕ್ ಗೂಡ್ಸ್ ವಾಹನ ಚಾಲಕರ ಮತ್ತು ಮಾಲಕರ ಸಂಘದ ಸಹಕಾರದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಕೆನರಾ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ಲೋಕೇಶ್ ಜೆ.ಡಿ ಅವರು ಉದ್ಘಾಟಿಸಿ ಮಾತನಾಡುತ್ತಾ, ಒಬ್ಬರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ರಕ್ತದಾನವು ಮಹತ್ವ ಪೂರ್ಣವಾದ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಈ ಶಿಬಿರ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಯುವ ಮುಖಂಡರಾದ ಶೇರಖಾನ್ ಇಬ್ರಾಹಿಂ ಲಿಂಬುವಾಲೆ, ಸಬ್ ಕಾ ಮಾಲಿಕ್ ಏಕ್ ಗೂಡ್ಸ್ ವಾಹನ ಚಾಲಕರ ಮತ್ತು ಮಾಲಕರ ಸಂಘದ ಪ್ರಮುಖರಾದ ಇಮ್ತಿಯಾಜ್, ರಕ್ತನಿಧಿ ಕೇಂದ್ರದ ನವ್ಯಾ ಅವರು ಶಿಬಿರಕ್ಕೆ ಶುಭ ಕೋರಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕರಾದ ವಿನಾಯಕ ಚೌಹ್ವಾಣ್ ಅವರು ಮಾತನಾಡಿ ದೇಶದ ಆರ್ಥಿಕತೆಗೆ ಕೆನರಾ ಬ್ಯಾಂಕ್ ಕೊಡುಗೆ ಅಪಾರವಾಗಿದೆ. ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯ ನಿಮಿತ್ತ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ದಾಂಡೇಲಿ ವಿಸ್ತರಣಾ ಕೇಂದ್ರದ ಯೋಜನಾಧಿಕಾರಿ ಮಹಾಬಲೇಶ್ವರ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಉದ್ದೇಶವನ್ನು ವಿವರಿಸಿ ಸ್ವಾಗತಿಸಿದರು. ಸಂಸ್ಥೆಯ ಮೇಲ್ವಿಚಾರಕರುಗಳಾದ ನಾರಾಯಣ ವಾಡಕರ ನಿರೂಪಿಸಿದ ಕಾರ್ಯಕ್ರಮಕ್ಕೆ ಅಂದಾನಪ್ಪ ಅಂಗಡಿ ವಂದಿಸಿದರು.
ಶಿಬಿರದ ಯಶಸ್ಸಿಗೆ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ನರ್ಸ್ ಬೇಬಿ ನಂದಾ, ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳಾದ ಪ್ರಿಯಾ ಸಂಶಿ, ನವೀನ, ವಾಸುದೇವ್ ಕಿತ್ತೂರ್ ಹಾಗೂ ಶ್ರೀ ಕಾಳಿ ದ್ವಿಚಕ್ರ ವಾಹನಗಳ ದುರಸ್ತಿಗಾರರ ಸಂಘ ಮತ್ತು ಸಬ್ ಕಾ ಮಾಲಿಕ್ ಏಕ್ ಗೂಡ್ಸ್ ವಾಹನ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.