ಕಾರವಾರ: ಜಿಲ್ಲಾ ಆಸ್ಪತ್ರೆ ಆವರಣದೊಳಗೆ ನಿಲ್ಲಿಸಿಟ್ಟಿದ್ದ ಮಾಜಾಳಿಯ ಗ್ರಾಮಲೆಕ್ಕಾಧಿಕಾರಿ ದೀಪಕ ನಾಯ್ಕ ಅವರ ಬೈಕ್ ಕಳ್ಳತನವಾಗಿದೆ.
ನಂದನಗದ್ದಾದಲ್ಲಿ ವಾಸವಿರುವ ದೀಪಕ ರಮಾಕಾಂತ ನಾಯ್ಕ ಅವರ ಮಗ ಅನಾರೋಗ್ಯಕ್ಕೀಡಾಗಿದ್ದು, ಈ ಹಿನ್ನಲೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಅ.3ರ ರಾತ್ರಿ ಬೈಕನ್ನು ಆಸ್ಪತ್ರೆ ಆವರಣದೊಳಗೆ ನಿಲ್ಲಿಸಿದ್ದರು. ಅ.4ರ ಬೆಳಗ್ಗೆ ನೋಡಿದಾಗ ಬೈಕ್ ಕಂಡಿರಲಿಲ್ಲ.
ಬೈಕ್ ಕಳೆದುಕೊಂಡ ಅವರು ಇದೀಗ ಗ್ರಾಮೀಣ ಭಾಗಕ್ಕೆ ಜನ ಸೇವೆಗೆ ತೆರಳಲು ಸಮಸ್ಯೆ ಅನುಭವಿಸುತ್ತಿದ್ದು, ಬೈಕ್ ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಆಸ್ಪತ್ರೆಗೆ ಆಗಮಿಸಿ ಸಿಸಿ ಕ್ಯಾಮರಾ ಪರಿಶೀಲಿಸಿದ್ದು, ಆದರೆ, ಬೈಕ್ ಕಳ್ಳತನವಾದ ದಿನ ಕ್ಯಾಮರಾ ದಿಕ್ಕು ಬದಲಾಗಿದ್ದು, ಕಳ್ಳರ ಪತ್ತೆಗೆ ನೆರವಾಗಿಲ್ಲ. ಕಳ್ಳತನಕ್ಕೂ ಮುನ್ನ ಕ್ಯಾಮರಾ ಮುಖ ತಿರುಗಿಸಿರುವ ಅನುಮಾನ ಕಾಡುತ್ತಿದೆ.
ಇನ್ನು ಜಿಲ್ಲಾಸ್ಪತ್ರೆ ಹೊರಭಾಗ ಬೀದಿ ದೀಪಗಳಿದ್ದರೂ ರಾತ್ರಿ ವೇಳೆ ಸರಿಯಾಗಿ ಉರಿಯುವುದಿಲ್ಲ. ಸಿಸಿ ಕ್ಯಾಮರಾ ಇದ್ದರೂ ಅದು ಎಲ್ಲಾ ಕಡೆ ನಿಗಾವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.