ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾಕರಣವನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಈಗಾಗಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದರೇ ಇತ್ತಿಚೀಗೆ ಕೆಲವು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದ್ದು, ಇನ್ನೂ ಕೋವಿಡ್-19 ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯದೇ ಉಳಿದಿರುವ 60 ವರ್ಷ ಮೇಲ್ಪಟ್ಟವರು ಹಾಗೂ ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಕೋವಿಡ್-19 ಸೊಂಕಿಗೆ ತುತ್ತಾಗುವ ಸಂಭವವಿರುತ್ತದೆ. ಈ ಗುಂಪಿನ ಫಲಾನುಭವಿಗಳನ್ನು ಆದ್ಯತೆ ಮೇರೆಗೆ ರಕ್ಷಿಸಬೇಕಾಗಿದ್ದು, ಉತ್ತರಕನ್ನಡ ಜಿಲ್ಲೆಗೆ 660 ಡೋಸ್ ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆ ಸರಬರಾಜಾಗಿದ್ದು ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆಯನ್ನು ವಿಜಾತಿ (ಹೆಟೆರೋಲಾಗಸ್) ಮನ್ನೆಚ್ಚರಿಕೆ ಡೋಸ್ ಆಗಿ ನೀಡಬೇಕಾಗಿರುತ್ತದೆ. ಆದ್ದರಿಂದ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2 ಡೋಸ್ ಲಸಿಕೆ ಪಡೆದು 6 ತಿಂಗಳು ಅಥವಾ 26 ವಾರಗಳನ್ನು ಪೂರೈಸಿದ 18 ವರ್ಷ ಮೇಲ್ಪಟ್ಟವರು ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಬಾಕಿ ಇರುವ ಫಲಾನುಭವಿಗಳು ಕೋರ್ಬಿವ್ಯಾಕ್ಸ್ ಲಸಿಕೆಯನ್ನು ಪಡೆಯಬಹುದಾಗಿರುತ್ತದೆ.
ಕೋರ್ಬಿವ್ಯಾಕ್ಸ್ ಲಸಿಕೆಯು ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಜಿಲ್ಲಾ ಆಸ್ಪತ್ರೆ ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಲಸಿಕೆಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನೀರಜ್ ಬಿ.ವಿ ಹಾಗೂ ಆರ್.ಸಿ.ಹೆಚ್ ಅಧಿಕಾರಿ ಡಾ.ನಟರಾಜ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.