ಶಿರಸಿ: ತಾಲೂಕಿನ ವಾನಳ್ಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ವಾನಳ್ಳಿ ಮತ್ತು ಕೊಡ್ನಗದ್ದೆ ಪಂಚಾಯತ ವ್ಯಾಪ್ತಿಯ ಊರ ಹಿರಿಯರ ಮಾರ್ಗದರ್ಶನದೊಂದಿಗೆ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ‘ರಂಗೋತ್ಸವ’ವನ್ನು ನ. 03 ಮತ್ತು 04 ರಂದು ಶ್ರೀ ಗಜಾನನ ಮಾಧ್ಯಮಿಕ ಶಾಲೆಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ನ.3, ಶುಕ್ರವಾರ ಸಮಯ ಮಧ್ಯಾಹ್ನ 3-30 ಘಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪಿ.ಜಿ. ಹೆಗಡೆ ಮಂಡೇಮನೆ ವಹಿಸಲಿದ್ದು, ಉದ್ಘಾಟಕರಾಗಿ ಮೆಣಸಿ ಸೊಸೈಟಿ ಅಧ್ಯಕ್ಷ ಎನ್.ಎಸ್. ಹೆಗಡೆ ಕೋಟಿಕೊಪ್ಪ ವಹಿಸಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಶಾಸಕ ಭೀಮಣ್ಣ ನಾಯ್ಕ, ಗ್ರಾಮ ಪಂಚಾಯತ ವಾನಳ್ಳಿ ಅಧ್ಯಕ್ಷೆ ಶ್ರೀಮತಿ ವೀಣಾ ಮಂಜುನಾಥ ಗೌಡ, ಗ್ರಾಮ ಪಂಚಾಯತ ಕೊಡ್ನಗದ್ದೆ ಅಧ್ಯಕ್ಷ ರಾಘವೇಂದ್ರ ವೆಂಕಟ್ರಮಣ ಹೆಗಡೆ, ಗ್ರಾಮ ಪಂಚಾಯತ ವಾನಳ್ಳಿ ಉಪಾಧ್ಯಕ್ಷ ಜಯರಾಮ ವೆಂಕಟ್ರಮಣ ಹೆಗಡೆ, ಗ್ರಾಮ ಪಂಚಾಯತ ಕೊಡ್ನಗದ್ದೆ ಉಪಾಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಮಹಾಬಲೇಶ್ವರ ಭಟ್ಟ,ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮೋಹನ ಮಹಾಬಲೇಶ್ವರ ಭಟ್ಟ ಜುಮ್ನಕಾನು, ಉಪಾಧ್ಯಕ್ಷ ಗಣೇಶ ನಾರಾಯಣ ಮಹಾಲೆ,ರಂಗ ನಿರ್ದೇಶಕ ಸತೀಶ ಶಿವರಾಮ ಹೆಗಡೆ ಆಗಮಿಸಲಿದ್ದಾರೆ.
ಇದೇ ವೇಳೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಸಂಜೆ 5 ಗಂಟೆಯಿಂದ ಸತೀಶ ಹೆಗಡೆ ಮೆಣಸಿಮನೆ ನಿರ್ದೇಶಿಸಿದ ಮಹಿಳೆಯರಿಂದ ‘ಪಚೀತಿ ತಂದ ಶ್ರೀಮತಿ ಪರಂಧಾಮ’ ನಾಟಕ ಪ್ರದರ್ಶನಗೊಳ್ಳಲಿದೆ.
ಸಾಯಂಕಾಲ 7-45ರಿಂದ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ವನಶ್ರೀ ಕಲಾಕೂಟ ಚಿಮ್ನಳ್ಳಿ ಶಿವಾನಂದ ಸಿದ್ದಿ ಸಂಗಡಿಗರಿಂದ ‘ಸಂಗ್ಯಾ–ಬಾಳ್ಯಾ’ ಯಕ್ಷಗಾನ ಪ್ರದರ್ಶನ ನೆರವೇರಲಿದೆ.
ನ.4 ಶನಿವಾರ ಸಂಜೆ 5.30 ರಿಂದ ಸ್ಥಳೀಯ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 8 ಘಂಟೆಗೆ ಸತೀಶ ಹೆಗಡೆ ಮೆಣಸಿಮನೆ ನಿರ್ದೇಶಿಸಿದ ಸಾಮಾಜಿಕ ಸಂಗೀತ ನಾಟಕ ‘ಸಿಂಧೂರ ತಂದ ಸೌಭಾಗ್ಯ ಅರ್ಥಾತ್ ಕಾಲಚಕ್ರ’ ನಾಟಕ ಪ್ರದರ್ಶನಗೊಳ್ಳಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.