ಶಿರಸಿ: ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ತೋಟಿಗ ಕೃಷಿಕರು ತೀರ್ವೆ ತುಂಬುತ್ತಾ ಬಂದಿರುವ ತಮ್ಮ ಭಾಗಾಯ್ತ ಕ್ಷೇತ್ರಕ್ಕೆ ಬಿಟ್ಟಿರುವ ಅಸೈನ್ಡ್ ಬೆಟ್ಟಭೂಮಿಯನ್ನು ಕಂದಾಯ ಇಲಾಖೆಯು ‘ಬ’ ಖರಾಬಿಗೆ ಒಳಪಡಿಸಿ ಸಾರ್ವಜನಿಕ ಸ್ವತ್ತಾಗಿ ಮಾಡಿದೆ.
ಈ ಕ್ರಮದ ವಿರುದ್ದ ಈಗಾಗಲೇ ನ್ಯಾಯಯುತ ಹೋರಾಟ ಆರಂಭಗೊಂಡಿದ್ದು, ಹೋರಾಟದ ಭಾಗವಾಗಿ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಮೂಲಕ ಎಸ್.ಕೆ.ಭಾಗ್ವತ್, ಶಿರಸಿಮಕ್ಕಿ ನೇತೃತ್ವದಲ್ಲಿ ತೋಟಿಗ ಪ್ರಮುಖರ ನಿಯೋಗವು ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಭೇಟಿಯಾಗಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದೆ.
ಸಮಸ್ಯೆ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಕಂದಾಯ ಸಚಿವರು ಬೆಟ್ಟಭೂಮಿ ಹಾಗೂ ಅಡಿಕೆ ತೋಟದ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಇಂಗಿತ ವ್ಯಕ್ತಪಡಿಸಿ, ಮನವಿ ಪರಿಶೀಲಿಸಿ, ಇಲಾಖೆಯಿಂದ ಆಗಿರುವ ಈ ಕ್ರಮದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಚಿವ ಕೃಷ್ಣಭೈರೇಗೌಡ ಅವರನ್ನು ಭೇಟಿಯಾದ ನಿಯೋಗದಲ್ಲಿ ದೀಪಕ ಹೆಗಡೆ ದೊಡ್ಡೂರು, ಶ್ರೀಪಾದ ಹೆಗಡೆ ಕಡವೆ, ಸಂತೋಷಕುಮಾರ ಗೌಡರ್ ಕಸಗೆ ಇದ್ದರು. ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ ಅವರನ್ನು ಶಿರಸಿಯಲ್ಲಿ ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಹೆಬ್ಬಾರ ತೋಟಿಗ ಕೃಷಿಕರ ಹಿತ ಕಾಯುವುದು ಮೊದಲ ಆದ್ಯತೆಯಾಗಿದೆ. ಈ ಬಗ್ಗೆ ವಿಶೇಷವಾಗಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಕಾರ್ಯದರ್ಶಿ ಎನ್.ಬಿ. ಹೆಗಡೆ ಮತ್ತೀಹಳ್ಳಿ, ಎಸ್.ಕೆ ಭಾಗ್ವತ್ ಶಿರಸಿಮಕ್ಕಿ, ಕೆಡಿಸಿಸಿ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಕೆಶಿನ್ಮನೆ, ಜಿ.ಆರ್ ಹೆಗಡೆ ಬೆಳ್ಳೆಕೇರಿ, ಗೋಪಾಲ ಹೆಗಡೆ ಮೆಣ್ಸಿಕೇರಿ, ಮುಂತಾದವರು ಉಪಸ್ಥಿತರಿದ್ದರು.