ಶಿರಸಿ: ಶಿಲ್ಪ ಕಲೆಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು.
ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತ, ನಗರಸಭೆ, ತಾಲೂಕಾ ಪಂಚಾಯತ, ವಿಶ್ವಕರ್ಮ ಸಮಾಜ ಬಾಂಧವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ, ಅವರು ಮಾತನಾಡಿದರು. ವಿಶ್ವಕರ್ಮ ಸಮಾಜ ಎಲ್ಲರಿಗೂ ಬೇಕಾದ ಸಮಾಜವಾಗಿದ್ದು, ಪ್ರತಿಯೊಂದು ಸಮಾಜದೊಂದಿಗೆ ಆತ್ಮೀಯತೆಯನ್ನು ಉಳಿಸಿಕೊಂಡು ಬಂದಿದೆ. ರಾಷ್ಟ್ರದ ಬಹುತೇಕ ಪ್ರಾಚೀನ ದೇವಾಲಯಗಳ ಸೃಷ್ಟಿಕರ್ತರು ವಿಶ್ವಕರ್ಮದವರಾಗಿದ್ದಾರೆ. ಪ್ರಪಂಚಕ್ಕೆ ವೈಭವಯುತ ಕಟ್ಟಡಗಳನ್ನು ನಿರ್ಮಿಸಿದ ಮೇಧಾವಿ ವಾಸ್ತುಶಿಲ್ಪಿಗಳು ಎಂಬ ಕೀರ್ತಿಗೆ ಈ ಸಮಾಜ ಪಾತ್ರವಾಗಿದೆ ಎಂದರು.
ಅಮರ ಶಿಲ್ಪಿ ಜಕಣಾಚಾರಿ ಅವರು ವಿಶ್ವಕರ್ಮ ಸಮಾಜದ ವ್ಯಕ್ತಿಯಾಗಿದ್ದು, ಅವರು ನಿರ್ಮಿಸಿದ ದೇವಾಲಯ ರಚನೆಗಳು, ಶಿಲ್ಪಗಳು ಕಣ್ಮನ ಸೆಳೆಯುವಂತೆ ಇದೆ. ಪಂಚ ಕುಲ ಕಸುಬುಗಳ ಮೂಲಕ ವಿಶ್ವಕರ್ಮರು ಗುರುತಿಸಿಕೊಂಡು ಕಾಯಕ ಯೋಗಿಗಳಾಗಿದ್ದಾರೆ ಎಂದು ಹೇಳಿದರು.
ಕಸ್ತೂರ ಬಾ ನಗರ ಶಾಲೆಯ ಶಿಕ್ಷಕಿ ಸುಧಾ ಸೀತಾರಾಮ ಆಚಾರ್ಯ ಉಪನ್ಯಾಸ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನೂರಾರು ಸಂಖ್ಯೆಯಲ್ಲಿ ವಿಶ್ವಕರ್ಮ ಸಮಾಜವರಿಂದ ಮಾರಿಕಾಂಬಾ ದೇವಸ್ಥಾನದಿಂದ ಬೈಕ್ ರ್ಯಾಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರೇಡ್- 2 ತಹಸೀಲ್ದಾರ ರಮೇಶ ಹೆಗಡೆ, ಸಮಾಜದ ಪ್ರಮುಖರಾದ ವಿಶ್ವನಾಥ ಆಚಾರ್ಯ, ಗಿರೀಶ ಆಚಾರಿ, ಆನಂದ ಆಚಾರ್ಯ, ಡಿ.ಈ.ಕಮ್ಮಾರ, ಮಾಲಿನಿ ಆಚಾರ್ಯ ಮತ್ತಿತರರು ಇದ್ದರು.