Slide
Slide
Slide
previous arrow
next arrow

ಬೆಟ್ಟ ಭೂಮಿ ಕ್ಷೇತ್ರವನ್ನು ‘ಬ’ ಖರಾಬ್‌ದಿಂದ ಮುಕ್ತಗೊಳಿಸಲು ಕಟ್ಟಾಗ್ರಹ: ಶಾಸಕರಿಗೆ ಮನವಿ ಸಲ್ಲಿಕೆ

300x250 AD

ಶಿರಸಿ: ನಮ್ಮ ಜಿಲ್ಲೆಯ ಬೆಟ್ಟಭೂಮಿ ಹಾಗೂ ಅಡಿಕೆ ಕ್ಷೇತ್ರಗಳು ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಕೃಷಿಕರು ಇವುಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ರೀತಿಯಲ್ಲಿ ಆಯಾ ಅಡಿಕೆ ಭಾಗಾಯ್ತ ಕ್ಷೇತ್ರಕ್ಕೆ ಬಿಟ್ಟ ಬೆಟ್ಟ ಭೂಮಿಯನ್ನು ಪಹಣಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಕೃಷಿಕರು ಈ ಭೂಮಿಗೂ ಸಹ ಬಾಗಾಯ್ತ ತೀರ್ವೆಯಲ್ಲಿ ತೀರ್ವೆಯನ್ನು ಸೇರಿಸಿ ಹೆಚ್ಚಿನ ತೀರ್ವೆ ತುಂಬುತ್ತಿದ್ದಾರೆ. ಆದ್ದರಿಂದ ಬೆಟ್ಟ ಭೂಮಿ ಕ್ಷೇತ್ರವನ್ನು ‘ಬ’ ಖರಾಬದಿಂದ ಮುಕ್ತಿಗೊಳಿಸಬೇಕೆಂದು ಆಗ್ರಹಿಸಲಾಯಿತು.

ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಮೂಲಕ ಸೆ.5ರಂದು ಶಾಸಕ ಭೀಮಣ್ಣ ನಾಯ್ಕ ಅವರಲ್ಲಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕರಿಗೆ ಉತ್ತರಕನ್ನಡ ಜಿಲ್ಲೆಯ ಅದರಲ್ಲಿಯೂ ವಿಶೇಷವಾಗಿ ಶಿರಸಿ ಉಪವಿಭಾಗ ವ್ಯಾಪ್ತಿಯ ಕೃಷಿಕರ ಪರವಾಗಿ ಮನವಿಯನ್ನು ಎಸ್.ಕೆ ಭಾಗ್ವತ್ ಶಿರ್ಸಿಮಕ್ಕಿ ನೇತೃತ್ವದಲ್ಲಿ ಸಲ್ಲಿಸಲಾಯಿತು.

ಬೆಟ್ಟ ಭೂಮಿಗಳು ಅಸೈನ್ಡ (ASSIGNED) ಭೂಮಿಯಾಗಿದ್ದು, ಅದಕ್ಕೆ ಸಂಬಂಧಪಟ್ಟ ತೋಟಿಗ ಕೃಷಿಕನು ವಹಿವಾಟುದಾರನಾಗಿರುತ್ತಾನೆ. ಬೆಟ್ಟ ಭೂಮಿಗೂ ತೀರ್ವೆ ಆಕರಣೆ ಆಗುತ್ತಿರುವುದರಿಂದ ಅದೂ ಕೂಡ ಮಾಲ್ಕಿ ಜಮೀನಿನ ಒಂದು ರೂಪವೇ ಆಗಿರುತ್ತದೆ. ಕಾರಣ ಅಸೈನ್ಡ ಆದ ಬೆಟ್ಟ ಭೂಮಿಯ ಕ್ಷೇತ್ರವನ್ನು ಹಾಗೂ ತೀರ್ವೆ ಆಕರಣೆ ಆಗುತ್ತಿರುವ ಭೂಮಿಯನ್ನು ‘ಬ’ಖರಾಬಿಗೆ ಒಳಪಡಿಸಲು ಬರಲಾರದು. ಹೀಗಿರುವಾಗ ಇತ್ತೀಚಿನ ವರ್ಷಗಳಲ್ಲಿ ಕಂದಾಯ ಇಲಾಖೆಯು ಬೆಟ್ಟಭೂಮಿಯನ್ನು ಪಹಣಿಯ ಕಾಲಂ.ನಂ.3ರಲ್ಲಿ ಪೂರ್ತಿಯಾಗಿ ಬ ಖರಾಬಿಗೆ ಒಳಪಡಿಸಿರುತ್ತದೆ.

ಬ ಖರಾಬಿಗೆ ಒಳಪಡುವ ಕ್ಷೇತ್ರವು ಸರ್ಕಾರದ ಹಕ್ಕಿಗೆ ಒಳಪಡುತ್ತದೆ. 2013ಕ್ಕಿಂತಲೂ ಪೂರ್ವದಲ್ಲಿ ಬೆಟ್ಟಭೂಮಿಗಳನ್ನು ಯಾವುದೇ ಖರಾಬ ಕ್ಷೇತ್ರಕ್ಕೆ ಒಳಪಡಿಸುತ್ತಿರಲಿಲ್ಲ. ಆದರೆ ಸರ್ಕಾರವು 2012ರಲ್ಲಿ ಕಂದಾಯ ಇಲಾಖೆಯು ಪಹಣಿ ಪತ್ರಿಕೆ ಸರಿಪಡಿಸುವ ಸುತ್ತೋಲೆಗೆ ಅನುಗುಣವಾಗಿ ಬೆಟ್ಟಭೂಮಿಯ ಪಹಣಿಯ ಕಾಲಂ ನಂ.3ರಲ್ಲಿ ವಿಸ್ತೀರ್ಣವನ್ನು ಬ ಖರಾಬ್ ಎಂದು ಹಾಗೂ ಕಾಲಂ ನಂ.9ರಲ್ಲಿ ವಿಸ್ತೀರ್ಣವನ್ನು ಶೂನ್ಯಗೊಳಿಸಿದ್ದು, ಆಕಾರಬಂದ್ ಗೆ ಅನುಗುಣವಾಗಿ ಶಿರಸಿ ಉಪವಿಭಾಗ ಮಟ್ಟದಲ್ಲಿ ಮಾತ್ರ ಬದಲಾವಣೆ ಕೈಗೊಂಡಿದೆ. 1965ಕ್ಕಿಂತಲೂ ಹಿಂದೆ ಗ್ರಾಮ ನಮೂನೆ ನಂ.1ರಲ್ಲಿ ಹಾಗೂ ಮ್ಯುಟೇಶನ್ ಎಂಟ್ರಿಯಲ್ಲಿ ಯಾವುದೇ ಖರಾಬಿಗೆ ಒಳಪಡದ ಬೆಟ್ಟ ಭೂಮಿಯನ್ನು ತದನಂತರದಲ್ಲಿ ಏಕಾಏಕಿ ಆಕಾರ್‌ಬಂದ್ ನಲ್ಲಿ ಬ ಖರಾಬಿಗೆ ಒಳಪಡಿಸಿ ಅದರ ಆಧಾರದ ಮೇಲೆ ಬದಲಾವಣೆ ಕೈಗೊಳ್ಳಲಾಗಿದೆ. ಬದಲಾವಣೆಗೊಂಡ ಈ ಕ್ರಮವು ಸಂಬಂಧಿಸಿದ ತೋಟಗಾರರ ಗಮನಕ್ಕೆ ಈಗ ಬಂದಿದ್ದು, ಕಂದಾಯ ಇಲಾಖೆಯು ಕೈಗೊಂಡಿರುವ ಈ ಕ್ರಮವನ್ನು ಎಲ್ಲಾ ರೈತ ಸಮಾಜವು ವಿರೋಧಿಸುತ್ತಿದೆ ಹಾಗೂ ಬ ಖರಾಬ ಕ್ಷೇತ್ರಕ್ಕೆ ಒಳಪಡಿಸುವುದರಿಂದ ಸರ್ಕಾರವು ತನ್ನ ಸ್ವಾಧೀನಕ್ಕೆ ಈ ಭೂಮಿಗಳನ್ನು ಪಡೆದುಕೊಳ್ಳಲು ಯತ್ನಿಸುತ್ತಿದೆ ಎನ್ನುವ ಆತಂಕವು ರೈತರಲ್ಲಿ ಮೂಡಿದೆ. ಕಾರಣ ಈ ಕ್ರಮ ಕೈಬಿಟ್ಟು ಆಕಾರಬಂದ್ ದುರಸ್ತಿಗೊಳಿಸಿ 2013ಕ್ಕಿಂತಲೂ ಪೂರ್ವದಲ್ಲಿ ಇರುವಂತೆ ಪೂರ್ತಿ ಕ್ಷೇತ್ರ ಪಹಣಿಯಲ್ಲಿ ನಮೂದಾಗುವಂತೆ ಕ್ರಮ ಕೈಗೊಂಡು ಬೆಟ್ಟ ಬಳಕೆದಾರರಿಗೆ ಪ್ರಸ್ತುತ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.

300x250 AD

ಈ ಎಲ್ಲಾ ಕಾರಣಗಳಿಂದಾಗಿ ಜಿಲ್ಲೆಯ ತೋಟಿಗ ಕೃಷಿಕರಿಗೆ ನೀಡಿರುವ ವಿಶೇಷಾಧಿಕಾರವಾಗಿರುವ ಬೆಟ್ಟಭೂಮಿಯನ್ನು ಕೃಷಿಕರಿಗೇ ಉಳಿಸುವ ಸಂಬಂಧ ರಾಜ್ಯ ಸರ್ಕಾರವು ಯುಕ್ತ ನಿರ್ಣಯ ಕೈಗೊಂಡು ಬೆಟ್ಟಭೂಮಿಗೆ ಸಂಬಂಧಿಸಿದ ಆಕಾರ ಬಂದ್‌ನಲ್ಲಿ 1965ರ ಪೂರ್ವದಲ್ಲಿ ದಾಖಲಾಗಿರುವ ಬ ಖರಾಬ್ ಅನ್ನು ದುರಸ್ಥಿಗೊಳಿಸಿ ಖರಾಬ್ ದಿಂದ ಬೆಟ್ಟಭೂಮಿಯನ್ನು ಮುಕ್ತಗೊಳಿಸಬೇಕು. ಅಲ್ಲದೇ ಉತ್ತರಕನ್ನಡ ಜಿಲ್ಲೆಯಲ್ಲಿನ ಅಡಿಕೆ ಮತ್ತು ಸಾಂಬಾರು ಭಾಗಾಯತಗಳಲ್ಲಿ, ಕೃಷಿಯ ಅವಶ್ಯಕತೆಯನ್ನು ಪರಿಗಣಿಸಿ, ಭಾಗಾಯತಗಳಿಗೆ ಲಾಗೂ ಎಂದು, ತೀರ್ವೆ ಆಕರಣೆ ಮಾಡಿ, ಒಂದು ಎಕರೆ ಭಾಗಾಯತಕ್ಕೆ ಲಭ್ಯತೆಯ ಅನುಸಾರವಾಗಿ 9 ಎಕರೆಯವರೆಗೆ ಹಂಚಲ್ಪಟ್ಟ ಅಸೈನ್ಡ ಬೆಟ್ಟ (ASSIGNED)ಪ್ರದೇಶದ RTC ಯಲ್ಲಿನ 3ನೇ ನಂ.ಕಾಲಂನಲ್ಲಿ ಸಂಪೂರ್ಣ ಬೆಟ್ಟ ಪ್ರದೇಶವನ್ನು ‘ಬ’ ಖರಾಬ್ ಎಂದು ಗುರುತಿಸಿರುವದನ್ನು ರದ್ದುಪಡಿಸತಕ್ಕದ್ದು. ಹಾಗೂ 9ನೇ ನಂ. ಕಾಲಂ ನಲ್ಲಿ ಕ್ಷೇತ್ರವನ್ನು ಶೂನ್ಯಗೊಳಿಸಿರುವುದನ್ನು ರದ್ದುಪಡಿಸಿ ಸಂಪೂರ್ಣ ಕ್ಷೇತ್ರವನ್ನು ಯಥಾವತ್ತಾಗಿ ಬರೆದು ಅವುಗಳನ್ನು ಅಸೈನ್ಡ ಬೆಟ್ಟ ಭೂಮಿ ಎಂದು ದಾಖಲಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಅಲ್ಲದೇ ಸರ್ಕಾರವು ಶತಮಾನಗಳ ಹಿಂದಿನಿಂದಲೂ ತೋಟಗಾರ ಕೃಷಿಕರಿಗೆ ನೀಡಿದ ಬೆಟ್ಟಭೂಮಿಯ ಈ ವಿಶೇಷಾಧಿಕಾಗಳನ್ನು ಹಾಗೆಯೇ ಮುಂದುವರೆಸಲು ಅವಕಾಶಮಾಡಿಕೊಟ್ಟು, ತೋಟಗಾರಿಕಾ ಹಾಗೂ ಸಾಂಬಾರ ಬೆಳೆಗಳಿಗೆ ಅತೀ ಅವಶ್ಯವಾದ ಹಾಗೂ ವೈಶಿಷ್ಟ್ಯ ಪೂರ್ಣವಾದ ಬೆಟ್ಟಭೂಮಿಯ ಹಕ್ಕು ಹಾಗೂ ಸೌಲಭ್ಯಗಳನ್ನು 2013 ರ ಪೂರ್ವದಲ್ಲಿ ಇರುವಂತೆ ಪಹಣಿಯಲ್ಲಿ ಯಥಾ ಸ್ಥಿತಿಯಲ್ಲಿ ಮುಂದುವರೆಸಲು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕೃಷಿಕ ಸಮುದಾಯದ ಪರವಾಗಿ ಹಕ್ಕೊತ್ತಾಯವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಕೃಷಿ ಪ್ರಮುಖರಾದ ಶ್ರೀಪಾದ ಹೆಗಡೆ ಕಡವೆ, ಎಮ್. ಎನ್ ಹೆಗಡೆ ಮುಂಡಿಗೇಸರ, ವಿಶ್ವನಾಥ ಹೆಗಡೆ ಪುಟ್ನಮನೆ, ಜಿ.ಆರ್ ಹೆಗಡೆ ಬೆಳ್ಳೇಕೇರಿ, ಸಂತೋಷಕುಮಾರ ಗೌಡರ್ ಕಸಗೆ, ವಿ.ಎಮ್. ಹೆಗಡೆ ಹಣಗಾರ, ಗೋಪಾಲ ಹೆಗಡೆ ಮೆಣ್ಸಿಕೇರಿ, ಶ್ರೀಕೃಷ್ಣ ಹೆಗಡೆ ಲಿಂಗದಕೋಣ, ಮಂಜುನಾಥ ಭಟ್ಟ ಬೆಳಖಂಡ, ಪ್ರವೀಣ ಗೌಡರ್ ತೆಪ್ಪಾರ, ಉಮೇಶ ಹೆಗಡೆ ಪುಟ್ನಮನೆ, ಹಾಗೂ ಬೆಟ್ಟ ಬಳಕೆದಾರ ಸಂಘದ ಪದಾಧಿಕಾರಿಗಳಾದ ವಿನಾಯಕ ಹೆಬ್ಬಲಸು, ಡಿ.ಜಿ.ಹೆಗಡೆ ಟೊಣ್ಣೇಮನೆ, ಸತೀಶ ಭಟ್ಟ ಮತ್ತೀಗಾರ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕರು ವಿಶೇಷ ಕಾಳಜಿ ವಹಿಸಿ ಈ ವಿಷಯದಲ್ಲಿ ಧನಾತ್ಮಕ ನಿರ್ಣಯ ದೊರಕುವ ಸಂಬಂಧ ಸಂಬಂಧಿಸಿದ ಸಚಿವರು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಲು ಕೃಷಿಕರ ನಿಯೋಗಕ್ಕೆ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಹಾಗೂ ಕೃಷಿಕರ ಈ ಸಮಸ್ಯೆ ಪರಿಹರಿಸಲು ವೈಯಕ್ತಿಕ ಹಾಗೂ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Share This
300x250 AD
300x250 AD
300x250 AD
Back to top