ಶಿರಸಿ: ಜಿಲ್ಲೆಯ ಹಿರಿಯ ಅರ್ಥದಾರಿ, ಸಂಸ್ಕೃತ ವಿದ್ವಾಂಸ, ಮೇಲುಕೋಟೆ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ, ತಾಲೂಕಿನ ಕೆರೇಕೈನ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಅವರಿಗೆ ಸಾಧಕ ಪ್ರಶಸ್ತಿ ನೀಡಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಆತ್ಮೀಯವಾಗಿ ಗೌರವಿಸಿ ಅಭಿನಂದಿಸಲಾಯಿತು.
ಬೆಳ್ತಂಗಡಿಯಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾ, ಬೆಳ್ತಂಗಡಿ ರೋಟರಿ ಕ್ಲಬ್, ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕೆರೇಕೈ ಅರ್ಥ ವಿಸ್ತಾರದ ಯಕ್ಷಾವತರಣ ಕಾರ್ಯಕ್ರಮದ ಸಮಾರೋಪದಲ್ಲಿ ಸಮ್ಮಾನ ನಡೆಸಲಾಯಿತು.
ಈ ವೇಳೆ ಯಕ್ಷಾವತರಣದ ಮಾರ್ಗದರ್ಶಕ, ವಾಗ್ಮಿ ಅಶೋಕ ಭಟ್ಟ ಉಜಿರೆ ಮಾತನಾಡಿ, ಉಮಾಕಾಂತ ಭಟ್ಟ ದೇಶದ ವಿದ್ವಾಂಸರ ಸಾಲಿನಲ್ಲಿ ಮೊದಲ ಎಣಿಕೆಯಲ್ಲಿ ಇರುವವರು. ಅವರ ಅರ್ಥಗಾರಿಕೆಯ ದಾಖಲೀಕರಣ ಕೂಡ ಇಲ್ಲಿ ಮಾಡಿದ್ದೇವೆ. ಅವರ ಅರ್ಥಗಾರಿಕೆ ಕೇವಲ ಅರ್ಥಗಾರಿಕೆಯಲ್ಲ, ಪ್ರವಚನವಲ್ಲ, ಅದೊಂದು ಕಾವ್ಯ ಎಂದೂ ಬಣ್ಣಿಸಿದರು.
ಈ ವೇಳೆ ಉದ್ಯಮಿಗಳಾದ ಎಸ್. ಶಿವಶಂಕರ ನಾಯ್ಕ, ಕೆ.ಅನಂತಕೃಷ್ಣರಾವ್, ರೋಟರಿ ಅಧ್ಯಕ್ಷ ಅನಂತ ಭಟ್ಟ ಮಚ್ಚಿಮಲೆ, ಕಾರ್ಯದರ್ಶಿ ವಿದ್ಯಾಕುಮಾರ ಕಾಂಚೋಡು ಇತರರು ಇದ್ದರು.