Slide
Slide
Slide
previous arrow
next arrow

ಜೂ.29ಕ್ಕೆ ಶಿರಸಿಯಲ್ಲಿ ‘ವನಸ್ತ್ರೀ ಮಲೆನಾಡು ಮೇಳ’

300x250 AD

ಶಿರಸಿ: ಜೂನ್ 29 ರಂದು ನಗರದ ಲಿಂಗದಕೊಣ ಕಲ್ಯಾಣ ಮಂಟಪದಲ್ಲಿ ‘ವನಸ್ತ್ರೀ’ಯ ಮಲೆನಾಡು ಮೇಳ ಆಯೋಜನಗೊಂಡಿದೆ. ಇದು ವನಸ್ತ್ರೀ ಸಂಘಟನೆಯಿಂದ ನಡೆಸುತ್ತಿರುವ 20ನೆಯ ಮಲೆನಾಡು ಮೇಳ. ಕಳೆದ 20 ವರ್ಷಗಳಿಂದ ಬಹುತೇಕವಾಗಿ ಜೂನ್ ಮೊದಲ ವಾರದಲ್ಲಿ, ಮೃಗಶಿರಾ ನಕ್ಷತ್ರದ ಸೆರಗಿನಲ್ಲಿ  ನಡೆಯುತ್ತಿದ್ದ ಮಲೆನಾಡು ಮೇಳ ಮಳೆಯ ಬರವಿಗಾಗಿ ಕಾದು ಮೂರುವಾರ ಮುಂದೆ ಹೋಗಿದೆ. ಅದೂ ಮಳೆಯ ನಿರೀಕ್ಷೆಯಲ್ಲಿ.!!


ಜೂನ್ ಮೊದಲ ವಾರದಲ್ಲಿ ಆರಂಭವಾಗುತ್ತಿದ್ದ ಮಳೆರಾಯ ಈ ಬಾರಿ ತುಂಬ ವಿಳಂಬ ಮಾಡುತ್ತಿದ್ದಾನೆ. ಮಲೆನಾಡಿನಂತಹ ಮಲೆನಾಡೂ ಸಹ ಅಸ್ವಾಭಾವಿಕವಾದ ತಾಪಮಾನ ಏರಿಕೆ,ನೀರಿನ ಬರದಿಂದ ಕಂಗೆಟ್ಟು ನಿಂತಿದೆ. ಬದಲಾಗುತ್ತಿರುವ ಬದುಕಿನ ಕ್ರಮದಿಂದಾಗಿ ಜಾಗತಿಕ ಹವಾಮಾನದ ಬಿಕ್ಕಟ್ಟಿಗೆ ಪಶ್ಚಿಮಘಟ್ಟಗಳ ನಡುವಣ ಮಲೆನಾಡೂ ತತ್ತರಿಸುವಂತಾಗಿದೆ. ಅಸ್ವಾಭಾವಿಕವಾಗಿ ಏರುತ್ತಿರುವ ತಾಪಮಾನ, ಮಳೆಯ ವಿಳಂಬ ಹಾಗೂ ನಿರಿನ ಬರದಂತಹ ಕಂಡು ಕೇಳರಿಯದ ಸಂಕಟಕ್ಕೆ ಮಲೆನಾಡು ಈಡಾಗಿದೆ.  ಇಂತಹ ಒಂದು ಸ್ಥಿಯನ್ನು ಮಲೆನಾಡಿಗರು  ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಸಾಧ್ಯವಾಗಿತ್ತು. ಆದರೆ ಸಂಭವಿಸಿದೆ..!
     

ಎಲ್ಲೋ ದೂರದಲ್ಲಿ ನಡೆಯುತ್ತಿದ್ದ,ಕೇಳುತ್ತಿದ್ದ  ವಿದ್ಯಮಾನ ಇಂದು ಇಲ್ಲಿ ನಮ್ಮ ಬುಡದಲ್ಲಿಯೇ ಸಂಭವಿಸತೊಡಗಿದ್ದು,ನಮ್ಮ ನಿತ್ಯದ ಬದುಕನ್ನು ದುರ್ಭರಗೊಳಿಸುತ್ತಿದೆ. ಇವತ್ತಿನ ಈ ಸಂದಿಗ್ಧ ಸ್ಥಿತಿಯ ಬಗ್ಗೆ ನಾವೆಲ್ಲರೂ ತುರ್ತಾಗಿ ಚಿಂತಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಳೆದ ದಶಕಗಳಲ್ಲಿ ಬದಲಾದ ನಮ್ಮ ಬದುಕಿನ ಕ್ರಮವನ್ನು ಪರ್ಯಾಲೋಚಿಸಿದರೆ,


1)  ಅಂತರ್ಜಲಕ್ಕೆ ಪೂರಕವಾಗಿ ಇಂಗುಗುಂಡಿಗಳಂತಿದ್ದ  ಭತ್ತದ ಗದ್ದೆಗಳು ಕಡಿಮೆಯಾಗುತ್ತಾ ಸಾಗುತ್ತಿದೆ.ಅಥವಾ ರಾಸಾಯನಿಕಗಳ ಬಳಕೆಯಿಂದ ಕಲುಶಿತಗೊಳ್ಳುವಂತಾಗಿದೆ.
2). ಅವೈಜ್ಞಾನಿಕವಾಗಿ ಬೋರ್ ವೆಲ್ ಗಳನ್ನು ತೋಡಿ ಅಂತರ್ಜಲಕ್ಕೆ ಖನ್ನ ಹಾಕುವ ಕೆಲಸ ನಡೆದಿದೆ.
3) ಬೆಳೆಗಳಲ್ಲಿ ಆಹಾರಪೂರೈಕೆಗೆ ಅಗತ್ಯವಾದ ಬೆಳೆಗಳ ಬದಲು ವಾಣಿಜ್ಯ ಬೆಳೆಗಳು ಹೆಚ್ಚುತ್ತಿವೆ. ನೀರನ್ನು ಹೆಚ್ಚು ಬೇಡುವ ಅಡಿಕೆ,ರಬ್ಬರ್ ನಂತಹ ತೋಟಗಳು ಹೆಚ್ಚಿ ನೀರಿನ ಬಳಕೆಯ ಪ್ರಮಾಣ ವಿಪರೀತವಾಗುತ್ತಿದೆ.
 4) ಏಕ ಜಾತಿಯ ವೃಕ್ಷಗಳ ನೆಡುತೋಪು, ಅಭಿವೃದ್ಧಿ,ಬಳಕೆಗಾಗಿ ಅರಣ್ಯದಮೇಲಿನ ಒತ್ತಡ ಹೆಚ್ಚುತ್ತಿದೆ.
5) ಕಾಡು ಮತ್ತು ಕೈತೋಟಗಳ ನಡುವಣ ಸಹಜ ಮತ್ತು ಸ್ವಾಭಾವಿಕ ಕೃಷಿಯ ಆದ್ಯತೆ ಕಡಿಮೆಯಾಗುತ್ತಿದೆ. ಸಾಂಪ್ರದಾಯಿಕ ಬೀಜಗಳ ಸಂರಕ್ಷಣೆ,ಪುನರುತ್ಪಾದನೆಯಲ್ಲಿ ವ್ಯತ್ಯಯ ಉಂಟಾಗಿದೆ.

300x250 AD

 ಪರಿಣಾಮವಾಗಿ ಪರಿಸರದ ಕೊಂಡಿ ವೇಗವಾಗಿ ಕಳಚುತ್ತಿದೆ.ನಾವು ಎಲ್ಲ ನಿಟ್ಟಿನಲ್ಲಿಯೂ  ಪರಾವಲಂಬಿಗಳಾಗುತ್ತಿದ್ದೇವೆ. ಇಂತಹ ಊಹಾತೀತ ಪರಿಸ್ಥಿತಿ  ಪ್ರಕೃತಿ ನಮಗೆ ನೀಡುತ್ತಿರುವ   ಎಚ್ಚರಿಕೆಯ ಗಂಟೆಯೇ ಸರಿ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಬದುಕಿಲ್ಲ. ಈ ವೈಪರಿತ್ಯಗಳಿಗೆ ಯಾವುದೇ ರೆಡಿಮೇಡ್ ಪರಿಹಾರವಿಲ್ಲ ಎನ್ನುವದನ್ನೂ ಅರಿತುಕೊಳ್ಳುವದು ಅನಿವಾರ್ಯ.
      ಈ ಹಿನ್ನೆಲೆಯಲ್ಲಿ ನಮ್ಮ ಸುಸ್ಥಿರ ಬದುಕನ್ನು  ಉಳಿಸಿಕೊಳ್ಳುವ ಪ್ರಯತ್ನವಾಗಿ ನಮ್ಮ ಅಂಗಳದಲ್ಲಿ ಪಾರಂಪರಿಕವಾಗಿ ಬೆಳೆಯಲಾಗುತ್ತಿದ್ದ  ಸಾಂಪ್ರದಾಯಿಕ ಕೈತೋಟಗಳು ಮತ್ತೆ ವ್ಯಾಪಕವಾಗ ಬೇಕಿದೆ.ನಮ್ಮ ಆಹಾರದ ಬಟ್ಟಲು ಸುರಕ್ಷಿತ ಮತ್ತು ಸ್ವಾವಲಂಬಿಯಾಗಲು ಪ್ರೋತ್ಸಾಹ ಬೇಕಿದೆ. ಸಾಂಪ್ರದಾಯಿಕ ಹಣ್ಣು-ತರಕಾರಿ-ಕೃಷಿಯುತ್ಪನ್ನಗಳ ಬೀಜಗಳ ಸಂರಕ್ಷಣೆಯ ಹೊಣೆಗಾರಿಕೆಯನ್ನು ನಿರ್ವಹಿಸ ಬೇಕಿದೆ.ನಮ್ಮದಾದ ಕೃಷಿಯಾಧಾರಿತ  ಪಾರಂಪರಿಕ ಜ್ಞಾನವನ್ನು ಉಳಿಸಿಕೊಳ್ಳುತ್ತಾ,ಪರಿಸರ ಹಾಗೂ ಭೂಮಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕಿದೆ.ಅದಕ್ಕಾಗಿ ಒಂದು ಕ್ರಿಯಾಶೀಲ ಪರಿವರ್ತನೆಗೆ ನಾವು ಸಜ್ಜಾಗಲೇ ಬೇಕಿದೆ.ಆ ಮೂಲಕ ನಮ್ಮ ಮುಂದಿನ ದಿನಗಳ ಅನಿಶ್ಚಿತ ಬದುಕನ್ನು, ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ತಯಾರಿ ನಡೆಸಬೇಕಿದೆ.
   

ಆ ನಿಟ್ಟಿನಲ್ಲಿ ನಮ್ಮ ‘ವನಸ್ತ್ರೀ’ ಯ ಮಹಿಳೆಯರು ಅರಿವಿನ ಮುಂಬೆಳಕನ್ನು ಪಡೆದು ಮುನ್ನೆಡೆಯುತ್ತಿದ್ದಾರೆ. ಕಾಡು-ಕೃಷಿ-ಕೈತೋಟಗಳ ನಡುವಿನ ಕೊಂಡಿಯಾಗಿ  ನಡೆಯುತ್ತಿದ್ದಾರೆ. ಸಾಂಪ್ರದಾಯಿಕ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ತಮ್ಮದೇ ಯೋಗದಾನವನ್ನು ಸಲ್ಲಿಸುತ್ತ ಬಂದಿದ್ದಾರೆ. ಇಂತಹ ಪ್ರಯತ್ನವನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಅದೇ ಬೆಳಕು ನಮ್ಮ ನೆಲದ ಉಳಿವಿನ ದಾರಿದೀಪವೂ ಆಗಬಲ್ಲದು.
ಆರದಿರಲಿ ಬೆಳಕು..
      – ಶೈಲಜಾ ಗೊರ್ನಮನೆ

Share This
300x250 AD
300x250 AD
300x250 AD
Back to top