ಶಿರಸಿ: ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ ಜೇನು ಕೃಷಿಕ, ತಾರಗೋಡ ಕಲ್ಲಳ್ಳಿ ಮನೆಯ ಮಧುಕೇಶ್ವರ ಹೆಗಡೆ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ಡಾಕ್ಟರೆಟ್ ಪದವಿ ನೀಡಿ ಪುರಸ್ಕರಿಸಲಾಗಿದೆ.
ಪಾರಂಪರಿಕ ವೈದ್ಯಕೀಯ ಹಾಗೂ ಜೇನಿನ ಮೂಲಕ ನೀಡಲಾಗುವ ಎಫಿ ಥೆರಪಿ ಚಿಕಿತ್ಸೆ ನೀಡುವ ಕುರಿತು ಮಂಡಿಸಿದ ವಿಷಯಕ್ಕೆ ಡಾಕ್ಟರೇಟ್ ಪದವಿ ನೀಡಲಾಯಿತು. ಜೇನುಹುಳ ಚುಚ್ಚಿಸುವಿಕೆಯ ಎಫಿ ಥೆರಪಿ ಮೂಲಕ ಸಂಧಿವಾತ, ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಚಿಕಿತ್ಸೆ ನೀಡುವ ಮೂಲಕ ಈಗಾಗಲೇ ಜೇನು ಮಧುಕೇಶ್ವರ ಗಮನ ಸೆಳೆದಿದ್ದಾರೆ. ಡಾಕ್ಟರೇಟ್ ಪದವಿಗೆ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರದ ವಿಜ್ಞಾನಿ ಡಾ.ರೂಪಾ ಪಾಟೀಲ ಶಿಫಾರಸ್ಸು ಮಾಡಿದ್ದರು. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕೂಡ ಸಹಕಾರ ನೀಡಿದ್ದರು.
ಮಧುಕೇಶ್ವರ ಹೆಗಡೆ ಅವರಿಗೆ ಶ್ರೀಲಂಕಾದ ಪ್ಲಾಂಟೇನನ್ ಇಂಡಸ್ಟ್ರೀ ಬೋರ್ಡ್ ನ ಶ್ರೀಕೃಶ್ ನಾಥ ಪಥಿರಾಜ, ಶ್ರೀಲಂಕಾದ ಕೋಲಂಬೋ ವಿವಿಯ ಪ್ರೊಫೆಸರ್ ಎಂ.ಜಿ.ಜಿ ಹೇಮಕುಮಾರ, ದೆಹಲಿ ಇಂಟರನ್ಯಾಶನಲ್ ಎಜ್ಯುಕೇಶನ್ ರಿಸರ್ಚ್ ಸೆಂಟರ್‌ನ ಚೇರಮನ್ ಸಂದೀಪಕುಮಾರ, ಒಡಿಸ್ಸಾದ ಡಾ.ಸಂಜಯಕುಮಾರ ಬೈರಿಕ್, ಅಮೇರಿಕಾದ ಡಾ.ಸುರೇಶ ನರಪಾವಿ ಇತರರು ಡಾಕ್ಟರೇಟ್ ಪ್ರದಾನ ಮಾಡಿದರು.