ಕುಮಟಾ: ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಅದಕ್ಕೆ ರಾಜಕಾರಣಿಗಳೇ ನೇರ ಹೊಣೆಗಾರರಾಗಿದ್ದಾರೆ. ಭ್ರಷ್ಟ ರಾಜಕಾರಣವನ್ನು ಬದಲಾಯಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ.ಆರ್.ಎಸ್) ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾದ್ಯಕ್ಷ ರವಿ ಕೃಷ್ಣಾ ರೆಡ್ಡಿ ಅಮೆರಿಕಾದಲ್ಲಿ ಸಾಫ್ಟ್ವೇರ್ ಇಂಜಿನೀಯರಾಗಿ ಸೇವೆ ಸಲ್ಲಿಸಿ ಈಗ ಬೆಂಗಳೂರಿನಲ್ಲಿ ನೆಲಸಿರುವ ಅವರು ಕಳೆದ 3 ವರ್ಷದ ಹಿಂದೆ ಪಕ್ಷ ಹುಟ್ಟು ಹಾಕಿದ್ದಾರೆ. ಪಕ್ಷ ಅಸ್ತಿತ್ವಕ್ಕೆ ಬಂದಾಗಿನಿಂದ ಭ್ರಷ್ಟಾಚಾರದ ನಿರ್ಮೂಲನೆಗೆ ಸರಕಾರಿ ಕಛೇರಿಗಳಲ್ಲಿ ಅನೇಕ ಸ್ಟಿಂಗ್ ಆಪರೇಷನ್ ಮೂಲಕ ಭ್ರಷ್ಟರಿಗೆ ಕಡಿವಾಣ ಹಾಕುವ ಕೆಲಸ ಮಾಡಿದ್ದೇವೆ ಎಂದರು.
ರೈತರ ಪ್ರಣಾಳಿಕೆಯಲ್ಲಿ 12 ಗಂಟೆ ಉಚಿತ ವಿದ್ಯುತ್ ನೀಡುವುದು ಸ್ವಾಮಿನಾಥ ವರದಿ ಜಾರಿ, ಬಡತನ ನಿರ್ಮೂಲನೆಗೆ ಸಂಪೂರ್ಣ ಮದ್ಯಪಾನ ನಿಷೇಧ, 10 ನೇ ತರಗತಿವರೆಗೆ ಉಚಿತ ಶಿಕ್ಷಣ, ನಿರುದ್ಯೋಗಿ ಪದವಿಧರರಿಗೆ ಮಾಶಾಸನ, ಮಾಶಾಸನ 2000 ಕ್ಕೆ ಏರಿಕೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ, ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಆಸ್ಪತ್ರೆ, ತಾಲೂಕಿಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಖಾಲಿ ಇರುವ 3 ಲಕ್ಷ ಸರಕಾರಿ ನೌಕರಿಗಳ ಭರ್ತಿ, ಪಾರದರ್ಶಕ ಆಡಳಿತಕ್ಕೆ ಲೋಕಾಯುಕ್ತ ಬಲಪಡಿಸುವಿಕೆ ನಮ್ಮ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ ಎಂದರು. ಕರ್ನಾಟಕದ ಉದ್ದಗಲಕ್ಕೂ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಈಗಾಗಲೇ 40 ಸಾವಿರಕ್ಕೂ ಅಧಿಕ ಜನ 100 ರೂ ಶುಲ್ಕ ನೀಡಿ ಸದಸ್ಯತ್ವ ಪಡೆದಿರುತ್ತಾರೆ. ಕರ್ನಾಟಕದ 224 ಕ್ಷೇತ್ರಗಳಲ್ಲಿಯೂ ಸ್ಪರ್ಧೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೊನ್ನಾವರ ತಾಲೂಕಾದ್ಯಕ್ಷ ನೀಲಕಂಠ, ಓಬಿಸಿ ಘಟಕಾದ್ಯಕ್ಷ ಎಚ್. ಎಸ್. ನಾಯ್ಕ , ಜಿಲ್ಲಾ ಸಂಚಾಲಕ ವಿನಾಯಕ , ತಾಲೂಕಾ ಪ್ರಮುಖ ವಿಷ್ಣು ಶೆಟ್ಟಿ , ಇತರರು ಉಪಸ್ಥಿತರಿದ್ದರು.
ಭ್ರಷ್ಟ ರಾಜಕಾರಣ ಬದಲಾಯಿಸಲು ಕೆಆರ್‌ಎಸ್ ಬೆಂಬಲಿಸಿ: ಜ್ಞಾನಸಿಂಧು ಸ್ವಾಮಿ
