ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಸಿದ್ಧತೆಗಾಗಿ ರಾಜ್ಯ ಸರ್ಕಾರ 300 ಕೋಟಿ ರು. ವೆಚ್ಚ ಮಾಡಲು ನಿರ್ಧರಿಸಿದೆ. ಈ ನಿಧಿಯು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಎರಡನೇ ಕಂತಿನ ಪೂರಕ ಅಂದಾಜುಗಳ ಒಂದು ಭಾಗವಾಗಿದೆ.
ಪೂರಕ ಅಂದಾಜುಗಳ ಪ್ರಮುಖ ಹಂಚಿಕೆಗಳಲ್ಲಿ ವಿವಿಧ ಪ್ರವಾಹ-ಪರಿಹಾರ ಚಟುವಟಿಕೆಗಳಿಗೆ 638.08 ಕೋಟಿ ರೂ. ಮೊತ್ತದಲ್ಲಿ, 2022 ರಲ್ಲಿ ಪ್ರವಾಹದಿಂದ ಹಾನಿಗೊಳಗಾದ ಬೆಳೆಗಳ ಪರಿಹಾರಕ್ಕಾಗಿ ರಾಜ್ಯ ಅನುದಾನವಾಗಿ 500 ಕೋಟಿ ರೂಪಾಯಿಗಳನ್ನು ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಮೂಲಸೌಕರ್ಯ ಕಾಮಗಾರಿಗಳಿಗೆ 124 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ವಿಧಾನಸಭಾ ಚುನಾವಣಾ ವೆಚ್ಚ ಭರಿಸಲು 300 ಕೋಟಿ ರೂ., ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ 5 ಕೋಟಿ ರೂ., ಹಕ್ಕು ಪತ್ರ ಒದಗಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಯಾದಗಿರಿ ಜಿಲ್ಲೆ ಕಾರ್ಯಕ್ರಮಕ್ಕೆ 7 ಕೋಟಿ ರು. ಸೇರಿದಂತೆ 8001.12 ಕೋಟಿ ರೂ ಮೊತ್ತದ ಎರಡನೇ ಕಂತಿನ ಪೂರಕ ಅಂದಾಜುಗಳನ್ನು ಉಭಯ ಸದನಗಳಲ್ಲಿ ಸರ್ಕಾರ ಮಂಡನೆ ಮಾಡಿದೆ. ಅತಿವೃಷ್ಟಿಯಿಂದ ಮೂಲಸೌಕರ್ಯಕ್ಕೆ ಆಗಿರುವ ಹಾನಿ ಸರಿಪಡಿಸಲು 124.50 ಕೋಟಿ ಹಾಗೂ ಕೊಡಗು ಜಿಲ್ಲೆಯಲ್ಲಿ ಮೂಲಸೌಕರ್ಯಕ್ಕೆ ಆಗಿರುವ ಸರಿಪಡಿಸಲು ನಡೆಸಿದ ಕಾಮಗಾರಿಗಳ ಬಾಕಿ ಬಿಲ್‌ಗಳ ಪಾವತಿಗೆ ಬೇಕಾದ 13.58 ಕೋಟಿ ಸೇರಿದಂತೆ ಒಟ್ಟು 638.08 ಕೋಟಿ, ಪುನೀತ್ ರಾಜ್‌ಕುಮಾರ್ ಅವರ ಶಕ್ತಿಧಾಮ ಸಂಸ್ಥೆಗೆ 2.5 ಕೋಟಿ ರೂ., ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 4.99 ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿಯವರು, ಸಚಿವರು ಹಾಗೂ ಇತರೆ ಗಣ್ಯರ ಪ್ರಯಾಣಕ್ಕೆ ಬಾಡಿಗೆ ಆಧಾರದ ಮೇಲೆ ಹೆಲಿಕಾಪ್ಟರ್ ಬಿಲ್ ಪಾವತಿಸಲು 6 ಕೋಟಿ ರು. ಒದಗಿಸಲಾಗಿದೆ.
ಇನ್ನು ಕರ್ನಾಟಕ ಕಂದಾಯ ಇಲಾಖೆಯ ಸಾಧನೆಗಳ ಹೆಸರಿನ ಕಾಫಿ ಟೇಬಲ್ ಪುಸ್ತಕಕ್ಕೆ ಹೆಚ್ಚುವರಿಯಾಗಿ 30 ಲಕ್ಷ ರೂ., ಬಿಬಿಎಂಪಿಯಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳ ವೇತನಕ್ಕಾಗಿ 200 ಕೋಟಿ ರೂ., ಇತ್ತೀಚೆಗೆ ಮೃತರಾದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಪಡೆದಿದ್ದ ಚಿಕಿತ್ಸೆಗೆ 46 ಲಕ್ಷ ರೂ. ಹೆಚ್ಚುವರಿಯಾಗಿ ಪಾವತಿಸಲು ಹಣ ನೀಡಲು ಪೂರಕ ಅಂದಾಜುಗಳಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ತರಗತಿ ಕೊಠಡಿಗಳ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳಿಗೆ 150 ಕೋಟಿ ರೂ. ಒದಗಿಸಲಾಗಿದೆ.