ಮುಂಡಗೋಡ: ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ಅಧ್ಯಕ್ಷ ವಿ.ಎಸ್ ಪಾಟೀಲ್ ನವೆಂಬರ್ ತಿಂಗಳಿನಲ್ಲಿ ಬಹುತೇಕ ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತ ಎನ್ನಲಾಗಿದೆ.
ಯಲ್ಲಾಪುರ ಕ್ಷೇತ್ರದಿಂದ ಒಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಗೆಲುವನ್ನ ಸಾಧಿಸಿ, ಎರಡು ಬಾರಿ ಕ್ಷೇತ್ರದಲ್ಲಿ ಸೋಲನ್ನ ಕಂಡಿದ್ದ ವಿ.ಎಸ್ ಪಾಟೀಲ್ ಕಳೆದ ಎರಡು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಇಂಗಿತವನ್ನ ವ್ಯಕ್ತಪಡಿಸಿದ್ದರು. ಕಳೆದ ವಿಧಾನಸಭಾ ಉಪಚುನಾವಣೆ ವೇಳೆಗೆ ಪಾಟೀಲ್ ಕಾಂಗ್ರೆಸ್ ಸೇರುತ್ತಾರೆ ಎನ್ನಲಾದರು, ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಜವಬ್ದಾರಿಯನ್ನ ವಹಿಸಿಕೊಂಡು ಬಿಜೆಪಿಯಲ್ಲಿಯೇ ಮುಂದುವರೆದಿದ್ದರು.
ಕ್ಷೇತ್ರದ ಹಾಲಿ ಶಾಸಕ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮೇಲೆ ಬಹಿರಂಗವಾಗಿ ತನ್ನ ವಿರೋಧವನ್ನ ವ್ಯಕ್ತಪಡಿಸಿದ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಸೇರುವ ಬಗ್ಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿ. ಎಸ್ ಪಾಟೀಲ್ ಅವರಿಗೆ ಕೋಕ್ ನಿಡಲಾಗಿತ್ತು.
ಈ ತಿಂಗಳಲ್ಲಿಯೇ ಪಾಟೀಲ್ ಮುಂಡಗೋಡ ಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮವನ್ನ ಮಾಡಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಸದ್ಯ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು ಇನ್ನು ಮೂರು ದಿನಗಳ ನಂತರ ಮುಂಡಗೋಡಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಕಾರ್ಯಕ್ರಮದ ದಿನಾಂಕವನ್ನ ನಾಯಕರುಗಳು ನೀಡಲಿದ್ದಾರೆ ಎನ್ನಲಾಗಿದೆ.
ಬಹುತೇಕ ನವೆಂಬರ್ ತಿಂಗಳಿನಲ್ಲಿ ಕಾರ್ಯಕ್ರಮವನ್ನ ನಡೆಸಲು ಪಾಟೀಲ್ ಚಿಂತನೆ ನಡೆಸಿದ್ದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಚಿವ ಆರ್ ವಿ ದೇಶಪಾಂಡೆ ಸೇರ್ಪಡೆ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಇನ್ನು ಕೆಲ ತಿಂಗಳಗಳ ಹಿಂದೆ ಕ್ಷೇತ್ರದಿಂದ ಯುವ ಮುಖಂಡ ಪ್ರಶಾಂತ್ ದೇಶಪಾಂಡೆ ಕಾಂಗ್ರೆಸ್ ನಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ ಪಾಟೀಲ್ ಸೇರ್ಪಡೆಯಿಂದ ವರಿಷ್ಟರು ಒಂದು ಕುಟುಂಬಕ್ಕೆ ಒಂದೇ ಟಿಕೇಟ್ ಎನ್ನುವ ಸೂಚನೆಯನ್ನ ಸಹ ನೀಡಿದ್ದು ಹಳಿಯಾಳ ಕ್ಷೇತ್ರದಿಂದ ದೇಶಪಾಂಡೆಯವರು ಕಣಕ್ಕೆ ಇಳಿಯುವುದರಿಂದ ಪ್ರಶಾಂತ್ ಈ ಬಾರಿ ಕಣಕ್ಕೆ ಇಳಿಯದೇ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಚಿಂತನೆ ನಡೆಸಿದ್ದು ಮುಂಡಗೋಡ ಕ್ಷೇತ್ರದಲ್ಲಿ ಸದ್ಯ ಹೆಚ್ಚಾಗಿ ಪ್ರಶಾಂತ್ ಗುರುತಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.