ಸಿದ್ದಾಪುರ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಒಳಗೊಳ್ಳದ ಕುಟುಂಬಗಳನ್ನು ಗುರುತಿಸಿ ಅಕುಶಲ ಕೆಲಸಕ್ಕಾಗಿ ನೋಂದಾಯಿಸುವ ದೃಷ್ಟಿಯಿಂದ ಹಮ್ಮಿಕೊಂಡ “ದುಡಿಯೋಣ ಬಾ” ಕಾರ್ಯಕ್ರಮದಲ್ಲಿ ದುಡಿಯುವ ಕೈಗಳು ಕೆಲಸದ ಭರದಲ್ಲಿ ಆರೋಗ್ಯ ನಿರ್ಲಕ್ಷಿಸುತ್ತಾರೆ ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೂಲಿಕಾರರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ಸಿದ್ದಾಪುರ ತಾಲೂಕಿನ ಕಾನಗೋಡ ಗ್ರಾಮ ಪಂಚಾಯತ್ ನಲ್ಲಿ ನರೇಗಾದಡಿ ಕಾಲುವೆ ಕೆಲಸ ಸಂಧರ್ಭದಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಆರೋಗ್ಯ ತಪಾಸಣೆ ನಡೆಸಿ ಬಿಪಿ, ಶುಗರ್, ನೆಗಡಿ, ಜ್ವರ ಪರೀಕ್ಷಿಸುವ ಮೂಲಕ NCD ಕ್ಯಾಂಪ್ ನಡೆಸಲಾಯಿತು.
ನರೇಗಾ ಸಹಾಯಕ ನಿರ್ದೇಶಕಿ ವಿದ್ಯಾ ದೇಸಾಯಿ ಮಾತನಾಡಿ ನರೇಗಾದಡಿ ಸಿಗುವ ಸೌವಲತ್ತುಗಳು, ಕೂಲಿಕಾರರ ದಿನಗೂಲಿ 349ರೂ ನಿಂದ 370ಕ್ಕೆ ಏರಿಕೆಯಾಗಿರುವುದು, ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಹೆಚ್ಚಿಸುವುದು, ಕೆಲಸದಲ್ಲಿನ ವಿನಾಯಿತಿ, ಯೋಜನೆಯಡಿ ಸಿಗುವ ಸಹಾಯಧನದ ಬಳಕೆ, ಮಹಿಳೆಯರಿಗೆ ಇರುವ ಸೌವಲತ್ತುಗಳು, NNMS ಹಾಜರಾತಿ ಇತ್ಯಾದಿ ವಿಷಯಗಳ ಕುರಿತು ತಿಳಿಸಿದರು.
ಉದ್ಯೋಗ ಖಾತ್ರಿಯಡಿ ಬಚ್ಚಲುಗುಂಡಿ, ಎರೆಹುಳು ತೊಟ್ಟಿ, ಕುರಿ, ಕೋಳಿ ಶೆಡ್, ದನದ ಕೊಟ್ಟಿಗೆ, ತೋಟಗಾರಿಕಾ ಬೆಳೆಗಳಿಗೆ ಸಹಾಯಧನ ಪಡೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದನ್ನು ತಿಳಿಸಿದರು. ಹಾಗೂ ವರ್ಷದಲ್ಲಿ ಕುಟುಂಬವೊAದಕ್ಕೆ 100ದಿನಗಳ ಕೆಲಸ ಖಾತ್ರಿ, ಗಂಡು ಹೆಣ್ಣಿಗೆ ಸಮಾನ ಕೂಲಿ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ, ಹಿರಿಯ ನಾಗರಿಕರು, ವಿಶೇಷ ಚೇತನರು, ಗರ್ಭಿಣಿ, ಬಾಣಂತಿಯರಿಗೆ ಶೇ.50 ರಷ್ಟು ಕೆಲಸದಲ್ಲಿ ವಿನಾಯಿತಿ ಇತರ ವಿಷಯಗಳ ಕುರಿತು ಅರಿವು ಮೂಡಿಸಲಾಯಿತು. ಇನ್ನೂ ನರೇಗಾ ಕೂಲಿಕಾರರನ್ನು PMJJBY ಮತ್ತು PMSBY ಉಳಿತಾಯ ಯೋಜನೆಯ ಸದುಪಯೋಗ ಪಡೆಯುವಂತೆ ತಿಳಿಸಿದರು.
ಈ ವೇಳೆ ಕೆಲವು ಕೂಲಿಕಾರರಿಗೆ ಉದ್ಯೋಗ ಚೀಟಿ ನೀಡಿ ಕೆಲಸಕ್ಕೆ ಆಹ್ವಾನ ನೀಡಲಾಯಿತು. ನವೀಕರಣ ಹಾಗೂ ಹೊಸ ಉದ್ಯೋಗ ಚೀಟಿ ಪಡೆಯುವುದು ಸೇರಿದಂತೆ ಉದ್ಯೋಗ ಚೀಟಿಯಲ್ಲಿ ಮರಣ ಹೊಂದಿದವರು ಹಾಗೂ ಮದುವೆಯಾಗಿ ಬೇರೆ ಊರಿಗೆ ಹೋಗಿರುವವರ ಹೆಸರು ರದ್ದು ಮಾಡುವುದು ಕಡ್ಡಾಯ ಎಂಬುದನ್ನ ತಿಳಿಸಿದರು.