ಬಿಜಿಎಸ್ ಸೆಂಟ್ರಲ್ ಸ್ಕೂಲ್ನಲ್ಲಿ ವಾರ್ಷಿಕ ಕ್ರೀಡಾಕೂಟ ಯಶಸ್ವಿ
ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಕ್ರೀಡಾಂಗಣದಲ್ಲಿ, ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮತ್ತು ಆದಿಚುಂಚನಗಿರಿ ಇಂಡಿಪೆಂಡೆಂಟ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಮಿರ್ಜಾನ್ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಜ್ಯೋತಿ ಬೆಳಗಿಸಿ, ನೀವು ಶಿಕ್ಷಣಕ್ಕೆ ಹೇಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿರೋ ಅಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೆ ನೀಡಿ. ಕ್ರೀಡೆಯು ಶರೀರವನ್ನು ಸಧೃಡಗೊಳಿಸುತ್ತದೆ. ನಿಮ್ಮ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಸರಿಯಾಗಿ ಇರುವಲ್ಲಿ ಕ್ರೀಡೆ ಬಹುಮುಖ್ಯ ಪಾತ್ರವಹಿಸುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ, ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಸೋಲು-ಗೆಲುವನ್ನು ಕೀಡಾಮನೋಭಾವದಿಂದ ಸಮಾನವಾಗಿ ಸ್ವೀಕರಿಸಿ,. ಬಾಡ-ಹೊಲನಗದ್ದೆಯಲ್ಲಿ ಜನಿಸಿದ ಕುಮಾರ ಯತೀಶ್ ನಾಯ್ಕ ಇಂದು ಅಂತರರಾಷ್ಟ್ರೀಯ ವಾಲಿಬಾಲ್ ಪಟುವಾಗಿ ಹೊರಹೊಮ್ಮಿದ್ದಾರೆ. ನೀವು ಕೂಡ ಕ್ರೀಡಯಲ್ಲಿ ಸಾಧನೆ ಮಾಡಿ ನಿಮ್ಮ ಕುಟುಂಬ, ಊರು, ತಾಲೂಕು, ಜಿಲ್ಲೆ, ತನ್ಮೂಲಕ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತನ್ನಿ. ವಿದ್ಯಾರ್ಥಿಗಳಾದ ನೀವು ಸಾಧನೆ ಮಾಡಬೇಕಾದರೆ ತುಂಬಾ ಪರಿಶ್ರಮ ಪಡಬೇಕು, ಅಂದಾಗ ಮಾತ್ರ ನೀವು ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಆಶೀರ್ವಚನ ನೀಡಿ, 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ ಶಾಂತಿಯ ದ್ಯೋತಕವಾದ ಪಾರಿವಾಳಗಳನ್ನು ಹಾರಿ ಬಿಡುವುದು ಮೂಲಕ ಚಾಲನೆ ನೀಡಿದರು. ಪೂಜ್ಯ ಸ್ವಾಮೀಜಿಯವರು ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾದ ಬಾಡ-ಹೊಲನಗದ್ದೆಯ ಪ್ರಖ್ಯಾತ ಅಂತರರಾಷ್ಷ್ರೀಯ ವಾಲಿಬಾಲ್ ಪಟು ಯತೀಶ್ ನಾಯ್ಕರವರನ್ನು ಹಾಗೂ ಬಿಜಿಎಸ್ ಶಾಲಾ ಶೈಕ್ಷಣಿಕ ನಿರ್ದೇಶಕರು ಮತ್ತು ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕರಾದ ಎಂ. ಟಿ. ಗೌಡರವರನ್ನು ಸನ್ಮಾನಿಸಿದರು.
ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾದ ಬಾಡ-ಹೊಲನಗದ್ದೆಯ ಪ್ರಖ್ಯಾತ ಅಂತರರಾಷ್ಷ್ರೀಯ ವಾಲಿಬಾಲ್ ಪಟು ಯತೀಶ್ ನಾಯ್ಕ ಕ್ರೀಡಾಧ್ವಜಾರೋಹಣ ಮಾಡಿ, ನಿಮ್ಮ ಶಾಲೆಯಲ್ಲಿ ನಿಮಗೆ ಶಿಕ್ಷಣಕ್ಕೆ ಮತ್ತು ಕ್ರೀಡೆಗೆ ಪೂರಕವಾದ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳಿವೆ. ಅದನ್ನು ಉಪಯೋಗಿಸಿ ನೀವು ಕೂಡ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಎಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದಂತಹ ತಂಡಗಳನ್ನು ಮಣಿಸಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಯತೀಶ್ ನಾಯ್ಕರ ಮಹತ್ವದ ಪಾತ್ರವನ್ನು ನಾವಿಲ್ಲಿ ಸ್ಮರಿಸಬಹುದು.
ಬಿಜಿಎಸ್ ಶಾಲಾ ಶೈಕ್ಷಣಿಕ ನಿರ್ದೇಶಕರು ಮತ್ತು ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕರಾದ ಎಂ. ಟಿ. ಗೌಡರವರು ಮಾತನಾಡಿ ಕ್ರೀಡೆಯು ವ್ಯಕ್ತಿಯ ದೈನಂದಿನ ಜೀವನ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡರಲ್ಲೂ ಗಮನಾರ್ಹ ಪರಿಣಾಮವನ್ನು ಬೀರುತ್ತದೆ ಎಂದರು. ಕ್ರೀಡೆ ಯಾವುದೇ ಜಾತಿ, ಮತ, ಪಂಥದ ಬೇಧವಿಲ್ಲದೆ ಕ್ರೀಡಾಳುಗಳಲ್ಲಿ ಅನ್ಯೋನ್ಯ ಸಂಬಂಧ, ಭಾಂಧವ್ಯ, ಸೌಹಾರ್ದತೆ ಬೆಳೆಯುವಲ್ಲಿ ಸಹಕಾರಿ ಎಂದರು. ಶಾಂತಿಯ ದ್ಯೋತಕವಾದ ಪಾರಿವಾಳಗಳನ್ನು ಹಾರಿಸುವುದರ ಮೂಲಕ ಮತ್ತು ಬಣ್ಣ ಬಣ್ಣದ ಬಲೂನ್ ಹಾರಿ ಬಿಡುವುದರ ಮೂಲಕ ಬಿಜಿಎಸ್ ಸೆಂಟ್ರಲ್ ಸ್ಕೂಲಿನ ವಾರ್ಷಿಕ ಶಾಲಾ ಕ್ರೀಡಾಕೂಟಕ್ಕೆ ಮೆರುಗು ಬಂದಿತು.
ಕುಮಟಾ ತಾಲೂಕಾ ಹಾಗೂ ಜಿಲ್ಲಾ ಮಟ್ಮದ ದಸರಾ ಕ್ರೀಡಾಕೂಟ, ಕದಂಬ ಸಹೋದಯ, ಕ್ರೀಡಾಕೂಟಗಳಲ್ಲಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ಟಸ್ಟ್ ಆಯೋಜಿಸಿದ್ ರಾಜ್ಯ ಮಟ್ಟದ ಕ್ರೀಡೋತ್ಸವದಲ್ಲಿ ಮತ್ತು ಸಿ.ಬಿ.ಎಸ್.ಸಿ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಹೊತ್ತೊಯ್ದು ಕ್ರೀಡಾಂಗಣದುದ್ದಕ್ಕೂ ಸಾಗುತ್ತಾ ಪೂಜ್ಯ ಸ್ವಾಮೀಜಿಯವರಿಗೆ ಮತ್ತು ಗಣ್ಯರಿಗೆ ಹಸ್ತಾಂತರಿಸಿ ಕ್ರೀಡಾ ಜ್ಯೋತಿಯನ್ನು ಎತ್ತಿ ಹಿಡಿಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿ ಪ್ರತಿನಿಧಿಯಾಗಿರುವ ಕು. ಅಭೀಜ್ಞಾ ಗೌಡ ಕ್ರೀಡಾ ಪ್ರತಿಜ್ಞಾವಿಧಿಯನ್ನು ಭೋದಿಸಿದಳು. ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿ, ಕ್ರೀಡೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ , ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಮಾನ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಸ್ವಾತಿ ಜೈನ್ ಮತ್ತು ಶಿಕ್ಷಕ ರಮೇಶ ನಾಯ್ಕ ನಿರ್ವಹಿಸಿದರು. ನಾಲ್ಕೂ ತಂಡಗಳ ಮೇಲ್ವಿಚಾರಕರ ಮಾರ್ಗದರ್ಶನದ ಮೇರೆಗೆ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚನಲದ ಬಗ್ಗೆ ವಿವರಣೆಯನ್ನು ಕು. ಪ್ರಥಮ ಪೈ ನೀಡಿದನು. ಶಿಕ್ಷಕಿ ಸೀಮಾ ಡಿಸೋಜ ವಂದಿಸಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎರಡುದಿನಗಳ ಕಾಲ ಅಥ್ಲೆಟಿಕ್ ಹಾಗೂ ಗುಂಪು ಆಟಗಳು ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯಕ, ಶ್ರೀಮತಿ ನಾಗರತ್ನ ನಾಯಕ ಹಾಗೂ ಶಾಲೆಯ ಎಲ್ಲಾ ಶಿಕ್ಷಕವೃಂದ ಮತ್ತು ಕಛೇರಿ ಸಿಬ್ಬಂದಿಗಳು ಸೇರಿ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಶಾಲೆಯ ನಾಲ್ಕು ಗುಂಪುಗಳು ಕೂಡಾ ಸಮಗ್ರ ವೀರಾಗ್ರಣಿಗಾಗಿ ತೀವ್ರ ಪೈಪೋಟಿಯನ್ನು ಒಡ್ಡಿದ್ದವು.