ಶಿರಸಿ: ಡಿಸೆಂಬರ್ 27 ರಿಂದ 29ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿರುವ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡ ಮಾಡುವ ‘ಹವ್ಯಕ ಕೃಷಿ ರತ್ನ’ ಪ್ರಶಸ್ತಿಗೆ ಉತ್ಸಾಹಿ ರೈತರಾದ ಶ್ರೀಧರ ಗೋವಿಂದ ಭಟ್ಟ, ಹೊಸಮನೆ (ಚವತ್ತಿ)ಯವರು ಆಯ್ಕೆಯಾಗಿದ್ದಾರೆ. ಡಿ. 27ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
ಇವರು ಪ್ರಮುಖವಾಗಿ, ಅಡಕೆ ಮತ್ತು ಕಾಳು ಮೆಣಸು ಬೆಳೆಗಳನ್ನು ಬೆಳೆಯುತ್ತಿದ್ದು, ಉಪ ಬೆಳೆಗಳಾಗಿ ಕಾಫಿ, ತೆಂಗು, ಜಾಯಿಕಾಯಿ, ಇತ್ಯಾದಿಗಳನ್ನು ಬೆಳೆಸುತ್ತಿದ್ದಾರೆ. ಇವರು ಅತ್ಯುತ್ತಮ ಗುಣಮಟ್ಟದ ಕಾಳು ಮೆಣಸು ಮತ್ತು ಬೋಳಕಾಳುಗಳನ್ನು ಉತ್ಪಾದಿಸಿ ಮಾರುಕಟ್ಟೆಯಲ್ಲಿ ಅಧಿಕ ಬೆಲೆಯನ್ನು ಪಡೆಯುತ್ತಿದ್ದಾರೆ. ಅಲ್ಲದೇ ಕಳೆದ ಎಂಟು ವರ್ಷಗಳಿಂದ ಉತ್ತಮ ತಳಿಯ ಅಡಕೆ, ಕಾಳು ಮೆಣಸು ಮತ್ತು ಕಾಫಿ ಬೆಳೆಗಳ ನರ್ಸರಿ ಸಹ ಮಾಡುತ್ತಿದ್ದಾರೆ. ತಮ್ಮ ತೋಟದಲ್ಲಿ ಕೃಷಿ ತಜ್ಞ ಡಾ. ಎಂ. ಎನ್. ವೇಣುಗೋಪಾಲ ಮಾರ್ಗದರ್ಶನದಲ್ಲಿ ಗುರುತಿಸಿದ 23ಕ್ಕೂ ಹೆಚ್ಚಿನ ಸ್ಥಳೀಯ ಕಾಳು ಮೆಣಸಿನ ತಳಿಗಳನ್ನು ಸಂರಕ್ಷಿಸಿ ಬೆಳೆಸುತ್ತಿದ್ದಾರೆ. ಇವರ ತೋಟದಿಂದಲೇ ಆಯ್ದ ‘ಸ್ವರ್ಣವಲ್ಲಿ ಸರ್ಯ’ ಮತ್ತು ‘ಸ್ವರ್ಣವಲ್ಲಿ ಶಾಲ್ಮಲಾ’ ಎಂಬ ಎರಡು ಕಾಳು ಮೆಣಸಿನ ತಳಿಗಳನ್ನು ಶ್ರೀ ಸ್ವರ್ಣವಲ್ಲಿ ಕೃಷಿ ಜಯಂತಿಯ (2015-16) ಸಂದರ್ಭದಲ್ಲಿ ಗುರುತಿಸಿ ರೈತರಿಗೆ ಪರಿಚಯಿಸಲಾಗಿದೆ.
ಇವರ ಪರಿಶ್ರಮವನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಅವುಗಳಲ್ಲಿ ಸಿದ್ದಾಪುರ ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರ, ಶಿರಸಿ ಟಿಎಂಎಸ್ನಿಂದ ಸನ್ಮಾನ, ಹಾಸನದ ಸಕಲೇಶಪುರದ ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಸನ್ಮಾನ, ಯಲ್ಲಾಪುರದ ಅಡಕೆ ವ್ಯಾಪಾರಸ್ಥರ ಸಂಘದಿಂದ ಪುರಸ್ಕಾರ, ಇತ್ಯಾದಿಗಳು ಪ್ರಮುಖವಾಗಿವೆ.