ಕಾರವಾರ: ರಾಜ್ಯದಲ್ಲಿರುವ 360 ಕಿ.ಮೀ ಕರಾವಳಿ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿನ ರೀತಿಯಲ್ಲಿ ಜಗತ್ತಿಗೆ ಪರಿಚಯಿಸುವ ಅಗತ್ಯವಿದ್ದು, ಇದನ್ನು ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಅವರು ಶುಕ್ರವಾರ ಮುರುಡೇಶ್ವರದಲ್ಲಿ ಮಾತನಾಡಿ,ಕರಾವಳಿ ಭಾಗದ ಪ್ರದೇಶದಲ್ಲಿರುವ ಮುರುಡೇಶ್ವರ, ಗೋಕರ್ಣ ಬೀಚ್‌ಗಳು ಗೋವಾ ಬೀಚ್‌ಗಳಿಂದ ಉತ್ತಮವಾಗಿದೆ ಅವುಗಳನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸಬೇಕಾಗಿದೆ. ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ಸಿದ್ಧಪಡಿಸಲು ಸಲಹೆ ಪಡೆಯಲಾಗಿದೆ. ಇಲ್ಲಿ ಬಂಡವಾಳ ಹೂಡಿಕೆದಾರರು ಬರಬೇಕು, ಇಲ್ಲಿನ ಯುವಕರಿಗೆ ಹೆಚ್ಚು ಉದ್ಯೋಗ ಸೃಷ್ಠಿಯಾಗಬೇಕು ಎಂದರು.
ಕರಾವಳಿಯಲ್ಲಿ ದೊಡ್ಡ ಮಟ್ಟದ ಉದ್ಯಮ ಬೆಳೆಸಲು ಯೋಜಿಸಲಾಗಿದೆ. ಇಲ್ಲಿಗೆ ಉತ್ತಮವಾದ ಹೂಡಿಕೆದಾರರ ಅವಶ್ಯಕತೆ ಇದೆ. ಇದರಿಂದ ಇಲ್ಲಿನ ಯುವಕರು ಉತ್ತಮ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿರುವುದರಿಂದ ಉದ್ಯೋಗ ಅವಕಾಶ ಸೃಷ್ಠಿಗೆ ಪೂರಕವಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಎಂ.ಸಿ.ಎ. ಅಧ್ಯಕ್ಷ ಸತೀಶ್ ಸೈಲ್ ಇದ್ದರು.